ನೂರೊಂದು ಗಣಪತಿ ವಿಗ್ರಹಗಳಿರುವ ದೇವಸ್ಥಾನ ಅಪರೂಪ. ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿ ನೂರೊಂದು ಗಣಪತಿ ದೇವಸ್ಥಾನವಿದೆ. ಇದನ್ನು ಆಡಳಿತ ಮಂಡಳಿ ನಿರ್ವಹಿಸುತ್ತಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹಾಲು ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಪ್ರಸಾದ ವಿನಿಯೋಗ ನಡೆಯುತ್ತದೆ.
ಮೊದಲೆಲ್ಲಾ ಮೊಹಲ್ಲಾಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಅದೇ ರೀತಿ ಇಲ್ಲಿ ಕೂಡ ನಾಗಣ್ಣ, ಶಿವರುದ್ರಪ್ಪ, ಶಿವಬಸಪ್ಪ ಸೇರಿದಂತೆ ಐದಾರು ಮಂದಿ ಗಣಪತಿ ಪ್ರತಿಷ್ಠಾಪಿಸಿ, ೪೦ ದಿನಗಳ ಕಾಲ ಪೂಜಿಸುತ್ತಿದ್ದರು. ಆ ವೃತ್ತದ ತುಂಬ ಭವ್ಯವಾದ ಅಲಂಕಾರ ಮಾಡುತ್ತಿದ್ದರು. ನಂತರ ರಾಮ- ಲಕ್ಷ್ಮಣ ಸೇರಿದಂತೆ ವಿವಿಧ ಸ್ತಬ್ಧ ಚಿತ್ರಗಳು, ನಂದಿಧ್ವಜ, ವೀರಗಾಸೆ ಸೇರಿದಂತೆ ಹತ್ತಾರು ಜಾನಪದ ಕಲಾತಂಡಗಳೊಂದಿಗೆ ದಸರಾ ಮೆರವಣಿಗೆ ರೀತಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಕಾರಂಜಿ ಕೆರೆಯಲ್ಲಿ ವಿಸರ್ಜಿಸುತ್ತಿದ್ದರು.
ಈ ಗಣೇಶೋತ್ಸವಕ್ಕೆ ೨೫ ವರ್ಷಗಳು ತುಂಬಿದ ರಜತ ಮಹೋತ್ಸವ ನೆನಪಿನಲ್ಲಿ ಅದೇ ಜಾಗದಲ್ಲಿ ಕಾರಂಜಿಯಲ್ಲಿ ೧೦೧ ಗಣಪತಿ ವಿಗ್ರಹಗಳನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು, ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರಿ ಬಾಲಗಂಗಾಧರನಾಥ ಸ್ವಾಮಿಗಳ ಸಾನ್ನಿಧ್ಯದಲ್ಲಿ ೧೯೬೫ ರಲ್ಲಿ ಪ್ರತಿಷ್ಠಾಪಿಸಲಾಯಿತು. ಆಗಿನಿಂದಲೂ ಟ್ರಸ್ಟ್ ರಚಿಸಿಕೊಂಡು ಪೂಜಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಈಗಿನ ಪ್ರಧಾನ ಅರ್ಚಕರಾದ ಸುನಿಲ್‌ಕುಮಾರ್ ಶಾಸ್ತ್ರಿಗಳು.
ಈ ದೇವಸ್ಥಾನ ವಿಗ್ರಹಗಳು ಶ್ರೀಚಕ್ರ ಆಕಾರದಲ್ಲಿವೆ. ಮೊದಲ ಸಾಲಿನಲ್ಲಿ ಬೃಹತ್ ಆದ ಏಕೈಕ ಗಣಪತಿ ವಿಗ್ರಹವಿದೆ. ಇದು ಆತ್ಮ- ಜೀವ ಎನ್ನಲಾಗುತ್ತದೆ. ನಂತರ ಎರಡನೇ ವೃತ್ತದಲ್ಲಿ ೧೬ ಗಣಪತಿ ವಿಗ್ರಹಗಳಿವೆ. ಇದನ್ನು ಷೋಡಸ ಎಂದು ಕರೆಯಲಾಗುತ್ತಿದೆ. ಮೂರನೇ ವೃತ್ತದಲ್ಲಿ ೨೪ ಗಣಪತಿ ವಿಗ್ರಹಗಳಿದ್ದು, ಅದನ್ನು ತತ್ವ ವೃತ್ತ ಎನ್ನಲಾಗುತ್ತದೆ. ನಾಲ್ಕನೇ ವೃತ್ತದಲ್ಲಿ ೨೮ ವಿಗ್ರಹಗಳಿವೆ. ಅವುಗಳನ್ನು ೨೭ ನಕ್ಷತ್ರ ಮತ್ತು ಅಭಿಜನ್ ಎಂದು ಗುರುತಿಸಲಾಗುತ್ತಿದೆ. ನಂತರದ ವೃತ್ತದಲ್ಲಿ ಪುರಾಣದಲ್ಲಿ ಗುರುತಿಸಿರುವಂತೆ ೩೨ ಗಣಪತಿ ವಿಗ್ರಹಗಳಿವೆ.
ದಾರಿ: ಈ ದೇವಸ್ಥಾನ ಮೈಸೂರು ಅರಮನೆಯಿಂದ ಕೂಗಳತೆ ದೂರದಲ್ಲಿದೆ. ಗ್ರಾಮಾಂತರ ಬಸ್ ನಿಲ್ದಾಣ, ರೈಲು ನಿಲ್ದಾಣದಿಂದ ಆಟೋರಿಕ್ಷಾ ಮೂಲಕ ತಲುಪಬಹುದು. ಇಲ್ಲವೇ ನಗರ ಬಸ್ ನಿಲ್ದಾಣಕ್ಕೆ ಬಂದಲ್ಲಿ ಅಲ್ಲಿಂದ ನಗರ ಸಾರಿಗೆ ಸೌಲಭ್ಯವಿದೆ. ಅಗ್ರಹಾರ ವೃತ್ತದಲ್ಲಿ ಇಳಿಯಬೇಕು.