ನಾಗಮಂಗಲ: ಜಮೀನು ವಿವಾದದ ಹಿನ್ನೆಲೆಯಲ್ಲಿ ರೌಡಿಯೊಬ್ಬ ತನ್ನ ಅಣ್ಣನ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಗಡಿಭಾಗ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಾಸು ಅಲಿಯಾಸ್ ವಿಷಕಂಠರ ಪುತ್ರ ಜೈಪಾಲ್ (24) ರನ್ನ ಗುಂಡಿಕ್ಕಿ ರೌಡಿ ಸೀಮೆಎಣ್ಣೆ ಕುಮಾರ್ ಹತ್ಯೆಗೈದಿದ್ದಾನೆ.
ಸಹೋದರರಾದ ವಾಸು ಮತ್ತು ರೌಡಿ ಸೀಮೆಎಣ್ಣೆ ಕುಮಾರ್ ನಡುವೆ ಜಮೀನಿನ ವಿಚಾರವಾಗಿ ವಿವಾದ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಗಲಾಟೆ ಸಹ ನಡೆಯುತ್ತಿತ್ತು. ಸ್ವಗ್ರಾಮ ಹನುಮನಹಳ್ಳಿ ಯಲ್ಲಿ ವಿವಾದ ಇತ್ಯರ್ಥಕ್ಕೆ ಮಾತುಕತೆಗೆ ಮುಂದಾಗಿದ್ದರು,ಅದರಂತೆ ಮಾತುಕತೆ ನಡೆಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ರೌಡಿ ಸೀಮೆಎಣ್ಣೆ ಕುಮಾರ್ ತನ್ನ ಬಳಿ ಇದ್ದ ಗನ್ ನಿಂದ ಅಣ್ಣನ ಮಗ ಜೈಪಾಲ್ ಮೇಲೆ ಗುಂಡು ಹಾರಿಸಿದ್ದು ಇದರಿಂದ ತೀವ್ರ ಗಾಯಗೊಂಡು ರಕ್ತಸ್ರಾವ ದಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸಮೀಪದಿಂದ ಮೂರು ಸುತ್ತು ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಪಾರಾಗಲು ಸಾಧ್ಯವಾಗಲಿಲ್ಲ, ಅಷ್ಟೇ ಅಲ್ಲದೆ ಗುಂಡೇಟಿನ ಸದ್ದಿಗೆ ಹೆದರಿದ ಸುತ್ತಮುತ್ತಲು ಇದ್ದ ಜನತೆ ರಕ್ಷಣೆಗೆ ಮುಂದಾಗಲಿಲ್ಲ ಎನ್ನಲಾಗಿದೆ.ಗುಂಡಿಕ್ಕಿ ಹತ್ಯೆ ಗೈದ ರೌಡಿ ಪರಾರಿಯಾಗಿದ್ದು,ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ನಾಗಮಂಗಲ-ಕೆ.ಆರ್.ಪೇಟೆ ಗಡಿ ಗ್ರಾಮದಲ್ಲಿ ನಡೆದ ದುಷ್ಕೃತ್ಯದ ಗುಂಡಿನ ಸದ್ದು ಸ್ಥಳೀಯರನ್ನ ಬೆಚ್ಚಿಬಿಳಿಸಿದೆ. ಸ್ಥಳೀಯರು ಯುವಕನ ಮೃತ ದೇಹವನ್ನು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಬಿಂಡಿಗನವಿಲೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ದುರಂತ ಸ್ಥಳದಲ್ಲಿ ಪರಿಶೀಲಿಸಿ ಆರೋಪಿ ಪತ್ತೆಗೆ ಸೂಚಿಸಿದ್ದಾರೆ.