ನ್ಯಾಯಾಲಯದ ಆವರಣದಲ್ಲಿ ಸಾಹಿತಿ ಕೆ ಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರು ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಅವಮಾನ ಉಂಟು ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಮೂರು ತಿಂಗಳ ಕಾಲ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್ ಆದೇಶಿಸಿದ್ದು, ಅವರ ಸನ್ನದನ್ನು ಅಮಾನತ್ತಿನಲ್ಲಿರಿಸಿದೆ.
ಸಾಹಿತಿ ಕೆ ಎಸ್ ಭಗವಾನ್ ದಾಖಲಿಸಿದ್ದ ದೂರನ್ನು ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಎಸ್ ಮಹೇಶ್ ಮತ್ತು ಪರಿಷತ್ ಸದಸ್ಯ ಎಸ್ ಹರೀಶ್ ನೇತೃತ್ವದ ಸಮಿತಿ ವಿಚಾರಣೆ ನಡೆಸಿ ಈ ಆದೇಶ ಮಾಡಿದೆ.
“ವಕೀಲೆಯಾಗಿ ಸಮವಸ್ತ್ರ ಧಾರಿಣಿಯಾಗಿದ್ದ ಮೀರಾ ಅವರು ಕ್ರಿಮಿನಲ್ ಪ್ರಕರಣವೊಂದರ ಆರೋಪಿಯಾದ ಕೆ ಎಸ್ ಭಗವಾನ್ ಅವರಿಗೆ ನ್ಯಾಯಾಲಯ ಆವರಣದಲ್ಲಿ ಮುಖಕ್ಕೆ ಮಸಿ ಬಳಿಯುವ ಮೂಲಕ ದುರ್ನಡತೆ ತೋರಿದ್ದಾರೆ. ವೃತ್ತಿಗೆ ಬದ್ಧರಾಗಿರದೆ ಶಿಷ್ಟಾಚಾರಗಳಿಗೆ ಅಪಮಾನ ಉಂಟು ಮಾಡಿದ್ದಾರೆ. ಹೀಗಾಗಿ, ಅವರು ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಬಾರದು ಮತ್ತು ವಕಾಲತ್ತು ಸಲ್ಲಿಸಬಾರದು. ಅಲ್ಲಿಯವರೆಗೆ ಅವರ ಸನ್ನದನ್ನು ಅಮಾನತಿನಲ್ಲಿ ಇರಿಸಲಾಗಿದೆ” ಎಂದು ಸಮಿತಿಯು ತನ್ನ ಆದೇಶದಲ್ಲಿ ವಿವರಿಸಿದೆ.
“ವಕೀಲೆ ಮೀರಾ ರಾಘವೇಂದ್ರ ಅಲಿಯಾಸ್ ಆರ್ ಮೀರಾ ರಾಘವೇಂದ್ರ, ವೃತ್ತಿಪರ ವಕೀಲೆಯಾಗಿ ದೂರಿನ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಪರಿಷತ್ ನೀಡಿದ ನೋಟಿಸ್ ಅನ್ನೂ ಸ್ವೀಕರಿಸದೆ ವಕೀಲರ ಪರಿಷತ್ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ” ಎಂದು ಸಮಿತಿಯು ಮೀರಾ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ: ‘ರಾಮ ಮಂದಿರ ಏಕೆ ಬೇಡʼ ಎಂಬ ತಮ್ಮ ಪುಸ್ತಕದಲ್ಲಿ ಲೇಖಕ ಕೆ ಎಸ್ ಭಗವಾನ್ ಅವರು ಶ್ರೀರಾಮನನ್ನು ಹೀಯಾಳಿಸಿದ್ದಾರೆ. ಅವಹೇಳನಕಾರಿ ಪದಗಳ ಬಳಕೆ ಮಾಡಿದ್ದಾರೆ. ಈ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ವಕೀಲೆ ಮೀರಾ ರಾಘವೇಂದ್ರ ಅವರು ಕೆ ಎಸ್ ಭಗವಾನ್ ವಿರುದ್ಧ 2ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಆರೋಪಿಯಾಗಿ 2021ರ ಫೆಬ್ರವರಿ 4ರಂದು ನ್ಯಾಯಾಲಯಕ್ಕೆ ಹಾಜರಾಗಿ ಷರತ್ತುಬದ್ಧ ಜಾಮೀನು ಪಡೆದು ಹೊರಬರುತ್ತಿದ್ದ ಕೆ ಎಸ್ ಭಗವಾನ್ ಅವರ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಬಳಿದಿದ್ದರು. ಅಲ್ಲದೆ, ಎಂ ಎಂ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರಂತೆ ನಿಮ್ಮನ್ನೂ ಹತ್ಯೆ ಮಾಡಲಾಗುವುದು ಎಂದು ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪವನ್ನು ಸಹ ಮೀರಾ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೀರಾ ಅವರು ತಮ್ಮ ಮುಖಕ್ಕೆ ಮಸಿ ಬಳಿದಿದ್ದ ನಡವಳಿಕೆಯನ್ನು ಆಕ್ಷೇಪಿಸಿ ಭಗವಾನ್ ಅವರು ರಾಜ್ಯ ವಕೀಲರ ಪರಿಷತ್ನಲ್ಲಿ ದೂರು ದಾಖಲಿಸಿದ್ದರು.
ಮತ್ತೊಂದು ಪ್ರಕರಣ: ಲೇಖಕ ಕೆ ಎಸ್ ಭಗವಾನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 295ಎ ಅಡಿಯಲ್ಲಿ “ಧರ್ಮ–ಧರ್ಮಗಳ ಮಧ್ಯೆ ಸಂಘರ್ಷ ಏರ್ಪಡಿಸುವಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ” ಎಂದು ಆರೋಪಿಸಿ ವಕೀಲ ಗಿರೀಶ್ ಭಾರದ್ವಾಜ್ ಅವರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವೊಂದನ್ನು 44ನೇ ಎಸಿಎಂಎಂ ನ್ಯಾಯಾಲಯ ಇತ್ತೀಚೆಗಷ್ಟೇ ವಜಾಗೊಳಿಸಿದೆ. ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು ಭಗವಾನ್ ಪರ ವಾದ ಮಂಡಿಸಿದ್ದರು.