ಶಿರ್ವ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಲಾ ಬಾಲಕಿಗೆ ಶಾಲಾ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಭಾನುವಾರ (ಸೆ. 15 ರಂದು) ಕಾಪು-ಶಿರ್ವ ರಸ್ತೆಯ ಬಾಲಾಜಿ ರೆಸ್ಟೋರೆಂಟ್ ಬಳಿ ನಡೆದಿದೆ.
ಶಿರ್ವ ನಿವಾಸಿ ಜೋಸೆಫ್ ಮಸ್ಕರೇನಸ್ ಅವರ ಪುತ್ರಿ ಮರ್ಲಿನ್ ಮಸ್ಕರೇನಸ್ (12) ಗಂಭೀರ ಗಾಯಗೊಂಡ ಬಾಲಕಿ .ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯಲ್ಲಿ ಕಲಿಯುತ್ತಿದ್ದ ಈಕೆ ಶಾಲೆಯ ಅನುಮತಿಯಂತೆ ಎರ್ಮಾಳಿನಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಶಾಲಾ ಬಸ್ಸಿನಲ್ಲಿ ವಾಪಾಸು ಬಂದ ಈಕೆ ತನ್ನ ಮನೆಯ ಬಳಿ ಇಳಿದು ಬಸ್‌ನ ಮುಂಭಾಗದಿಂದ ಬಲಭಾಗದಲ್ಲಿರುವ ತನ್ನ ಮನೆಗೆ ಬರುವಾಗ ಬಸ್‌ನ ಹಿಂಭಾಗದಿಂದ ಬಂದ ಮತ್ತೂಂದು ಬಸ್ ಓವರ್‌ಟೇಕ್ ಮಾಡುವ ಭರದಲ್ಲಿ ವೇಗವಾಗಿ ಬಂದು ಬಾಲಕಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಬಾಲಕಿಯ ಪಕ್ಕೆಲುಬು,ತಲೆ ,ಕಣ್ಣು ಹಾಗೂ ಬಲಭುಜಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿಯ ತಂದೆ ನೀಡಿದ ದೂರಿನಂತೆ ಬಸ್ ಚಾಲಕ ಅಬ್ದುಲ್ ಬಶೀರ್ ವಿರುದ್ಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.