ವಿಜಯಪುರ: ಮೇಲಾಧಿಕಾರಿಗಳ ಕಿರುಕುಳ ಸಹಿಸದೇ ಜಿಲ್ಲೆಯ ಸಿಂದಗಿ ಪಟ್ಟಣದ ತಹಶಿಲ್ದಾರ ಕಚೇರಿ ಆವರಣದಲ್ಲಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ತಾಲ್ಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್(54) ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ಶಿಕ್ಷಕ ಬರೆದಿರುವ ಪತ್ರದ ಆಧಾರದ ಮೇಲೆ ಸಿಂದಗಿ ಬಿಇಒ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಮುಖ್ಯ ಶಿಕ್ಷಕನ ಅಂಗಿಯ ಜೇಬಿನಲ್ಲಿ ಡೆತ್ ನೋಟ್ ದೊರೆತಿದೆ. ಅದರಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ, ಗೋಲಗೇರಿ ವಲಯದ ಶಿಕ್ಷಣ ಇಲಾಖೆಯ ಸಿಆರ್‌ಪಿ ಜಿ.ಎನ್.ಪಾಟೀಲ, ಸಾಸಾಬಾಳ ಶಾಲೆಯ ಜಿಪಿಟಿ ಸಹಶಿಕ್ಷಕ ಬಿ.ಎಂ.ತಳವಾರ, ಮಾಡಬಾಳ ಸರ್ಕಾರಿ ಶಾಲೆಯ ಹಿರಿಯ ಮುಖ್ಯಶಿಕ್ಷಕ ಎಸ್.ಎಲ್.ಭಜಂತ್ರಿ ಹಾಗೂ ಗ್ರಾಮದ ಸಂಗಮೇಶ ಚಿಂಚೋಳಿ ಇವರ ಕಿರುಕುಳ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ.
ದೂರಿನಲ್ಲೇನಿದೆ ?
ಶಾಲೆಯ ವಿಷಯದಲ್ಲಿ ಬೇಜವಾಬ್ದಾರಿತನ ಮಾಡಿ ನನ್ನನ್ನು ಬಲಿಪಶುವನ್ನಾಗಿ ಮಾಡಲು ಹೊಂಚು ಹಾಕಿದ್ದರು. ಬರೀ ಶಿಕ್ಷಕರ ಹಾಜರಿ, ಮಕ್ಕಳ ಹಾಜರಿ ಪುಸ್ತಕ ಮಾತ್ರ ಕೊಟ್ಟು ಮುಖ್ಯಶಿಕ್ಷಕ ಹುದ್ದೆಯ ಅಧಿಕಾರ ಕೊಟ್ಟಿರುವ ಮೊದಲಿನ ಮುಖ್ಯಶಿಕ್ಷಕ ಜಿ.ಎನ್.ಪಾಟೀಲ ಮೋಸ ಮಾಡಿದ ಮೊದಲಿಗ. ಈತನು ಶಾಲಾ ದಾಖಲೆಗಳನ್ನು ಸರಿಯಾಗಿ ಬರೆಯದೇ ಇದ್ದುದದರಿಂದ ಕ್ಷೇತ್ರಶಿಕ್ಷಣಾಧಿಕಾರಿ ಹರನಾಳ ಪದೇ, ಪದೇ ನನಗೆ ನೋಟಿಸ್ ಕೊಟ್ಟು ಹಿಂಸಿಸುತ್ತಿದ್ದಾರೆ. ಅವರಿಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ಅವರು ನನ್ನನ್ನು ಹೊಣೆ ಮಾಡಿದ್ದಾರೆ. ಜೊತೆಗೆ ಸಾಸಾಬಾಳ ಗ್ರಾಮದ ಸಂಗಮೇಶ ಚಿಂಚೋಳಿ, ಶಿಕ್ಷಕರಾದ ಭಜಂತ್ರಿ, ತಳವಾರ ಇವರೂ ಕೂಡ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಹೋಗಿದ್ದೇನೆ. ನಾನು ಎಲ್ಲಿಯಾದರೂ ಹೋಗಿ ಸಾಯುತ್ತೇನೆ ಅಂತಾ ಹೇಳುತ್ತಿದ್ದರು ಎಂದು ಮೃತ ಶಿಕ್ಷಕನ ಪತ್ನಿ ಮಹಾದೇವಿ ನಾಯಕಲ್ ಸಿಂದಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಗೋಲಗೇರಿ ವಲಯ ಶಿಕ್ಷಣ ಇಲಾಖೆ ಸಿಆರ್’ಪಿ ಜಿ.ಎನ್.ಪಾಟೀಲ, ಸಾಸಾಬಾಳ ಜಿಪಿಟಿ ಸಹಶಿಕ್ಷಕ ಬಿ.ಎಂ.ತಳವಾರ, ಮಾಡಬಾಳ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಎಸ್.ಎಲ್.ಭಜಂತ್ರಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಶಿರಹಟ್ಟಿಮಠ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕ್ಷೇತ್ರಶಿಕ್ಷಣಾಧಿಕಾರಿ ಹರನಾಳ ಅವರನ್ನು ಅಮಾನತುಗೊಳಿಸುವ ಕುರಿತಾಗಿ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.
ಐದು ಜನರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಇಲ್ಲಿಯ ತಾಲ್ಲೂಕು ಆಡಳಿತ ಸೌಧದ ಎದುರು ಮೃತ ಶಿಕ್ಷಕನ ಶವವಿಟ್ಟು ಕೋರವಾರ ಗ್ರಾಮಸ್ಥರು, ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.