ಬೆಂಗಳೂರು(Bengaluru): ಪೊಲೀಸರ ಕಾರ್ಯವೈಖರಿ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ‘ದರ್ಪಣ’ ಕ್ಯೂಆರ್ ಕೋಡ್ ವ್ಯವಸ್ಥೆ ಯಶಸ್ವಿಯಾಗಿದ್ದು, ಉತ್ತಮ ಕೆಲಸ ಮಾಡಿದ ಪೊಲೀಸರಿಗೆ ಪ್ರವಾಸ ಹಾಗೂ ಸಿನಿಮಾ ಟಿಕೆಟ್ ಉಡುಗೂರೆಯಾಗಿ ನೀಡಲಾಗುತ್ತಿದೆ.
ಆಗ್ನೇಯ ವಿಭಾಗದ ಎಲ್ಲ ಠಾಣೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಠಾಣೆಗೆ ಭೇಟಿ ನೀಡುವ ಜನ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆ್ಯಪ್ ಮೂಲಕ ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದಾರೆ.
ಇದುವರೆಗೂ 3,484 ಮಂದಿ ಆ್ಯಪ್ ಇನ್’ಸ್ಟಾಲ್ ಮಾಡಿಕೊಂಡಿದ್ದು, ಅದರಲ್ಲಿ 2,771 ಮಂದಿ ಅಭಿಪ್ರಾಯ ದಾಖಲಿಸಿದ್ದಾರೆ. ಬಹುತೇಕರು ಪೊಲೀಸರ ವಿರುದ್ಧ ದೂರು ಹೇಳಿದ್ದಾರೆ. ಕೆಲವರು ಮಾತ್ರ ಪೊಲೀಸರ ಕೆಲಸವನ್ನು ಶ್ಲಾಘಿಸಿ ಉತ್ತಮ ಅಂಕಗಳನ್ನು (ಸ್ಟಾರ್) ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಪಿ ಸಿ.ಕೆ.ಬಾಬಾ, ಉತ್ತಮ ಕೆಲಸ ಮಾಡಿ ಜನರಿಂದ ಹೆಚ್ಚು ಅಂಕ ಪಡೆದ ಮೂವರು ಪೊಲೀಸರನ್ನು ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ಕಳುಹಿಸಲಾಗಿದೆ. ಐವರು ಪೊಲೀಸರಿಗೆ ಸಿನಿಮಾ ನೋಡಲು ಅವಕಾಶ ಕಲ್ಪಿಸಿ ಟಿಕೆಟ್’ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು.