ಮನೆ ರಾಷ್ಟ್ರೀಯ ಅಮರನಾಥ ಯಾತ್ರೆಗೆ ಆಧಾರ್‌ ಕಡ್ಡಾಯ

ಅಮರನಾಥ ಯಾತ್ರೆಗೆ ಆಧಾರ್‌ ಕಡ್ಡಾಯ

0

ಶ್ರೀನಗರ (Shreenagar): ಭಾರತೀಯರ ಪ್ರಸಿದ್ಧ ಯಾತ್ರಸ್ಥಳವಾದ ಅಮರನಾಥ ಯಾತ್ರೆಗೆ ಜಮ್ಮು ಕಾಶ್ಮೀರ ಆಡಳಿತವು ಅಧಾರ್‌ ಕಡ್ಡಾಯಗೊಳಿಸಿದೆ.

ಜಮ್ಮು ಮತ್ತು ಕಾಶ್ಮೀರ ಆಡಳಿತವು ಈ ಕುರಿತು ಮಾಹಿತಿ ನೀಡಿದ್ದು, ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಧಾರ್ ಕಾರ್ಡ್ ದೃಢೀಕರಣ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ತಮ್ಮ ಆಧಾರ್ ಕಾರ್ಡ್ ಅನ್ನು ಒದಗಿಸಬೇಕು ಎಂದು ಹೇಳಿದೆ.

ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ (ಸಾಮಾಜಿಕ ಕಲ್ಯಾಣ, ನಾವೀನ್ಯತೆ, ಜ್ಞಾನ) ನಿಯಮಗಳು 2020 ರ ನಿಯಮ 5 ರ ಅನುಸಾರವಾಗಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಅಮರನಾಥ ತೀರ್ಥಯಾತ್ರೆ ಕೈಗೊಳ್ಳಲು ಬಯಸುವ ಯಾತ್ರಾರ್ಥಿಗಳಿಗೆ ಈ ಮೂಲಕ ಸೂಚನೆ ನೀಡಿದೆ.

ಅಧಿಕೃತ ಗೆಜೆಟ್‌ನಲ್ಲಿ ಈ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಆಧಾರ್ ಹೊಂದಿರುವ ಪುರಾವೆಗಳನ್ನು ಒದಗಿಸಬೇಕು. ಇಲ್ಲವೆ ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು ಎಂದು ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಪ್ರತಿ ಮಾರ್ಗಕ್ಕೆ 10,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ಹಿಮಾಲಯದ ಗುಹಾ ದೇಗುಲಕ್ಕೆ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಅಮರನಾಥ ದೇಗುಲ ಮಂಡಳಿಯು ಈ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಿಕರ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರನ್ನು ಹೊರತುಪಡಿಸಿ, ಪ್ರತಿ ಮಾರ್ಗದಲ್ಲಿ ದಿನಕ್ಕೆ 10,000 ಯಾತ್ರಾರ್ಥಿಗಳಿಗೆ ಮಾತ್ರ ಈಗ ಅವಕಾಶ ನೀಡಲಾಗುತ್ತಿದೆ.

ಈ ವರ್ಷ ಅಮರನಾಥ ಯಾತ್ರೆ 43 ದಿನಗಳ ಕಾಲ ನಡೆಯಲಿದೆ. ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆಯು ಏಪ್ರಿಲ್‌ನಿಂದಲೇ ಪ್ರಾರಂಭವಾಗಿತ್ತು, ದಿನಕ್ಕೆ 20,000 ನೋಂದಣಿಗಳ ಮಿತಿಯನ್ನು ಇಡಲಾಗಿತ್ತು. ಇದೀಗ ಯಾತ್ರಾರ್ಥಿಗಳಿಗೆ ಆಧಾರ್‌ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ.

ಅಮರನಾಥನ 3,880 ಮೀಟರ್ ಎತ್ತರದ ಪವಿತ್ರ ಗುಹಾ ದೇಗುಲಕ್ಕೆ 43 ದಿನಗಳ ಯಾತ್ರೆಯು ಜೂನ್ 30 ರಂದು ಎರಡು ಮಾರ್ಗಗಳಿಂದ ಪ್ರಾರಂಭವಾಗಲಿದ್ದು, ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಸಾಂಪ್ರದಾಯಿಕ 48-ಕಿಮೀ ನುನ್ವಾನ್ ಮಾರ್ಗ ಮತ್ತು 14 ಕಿಮೀ ಚಿಕ್ಕದಾದ ಬಾಲ್ಟಾಲ್ ಮಾರ್ಗ ಮಧ್ಯ ಕಾಶ್ಮೀರದ ಗಂದರ್ಬಾಲ್ ನಡುವೆ ಯಾತ್ರೆ ಸಾಗಲಿದೆ. ಯಾತ್ರಾರ್ಥಿಗಳು ಕಣಿವೆಯಲ್ಲಿರುವ ಬೇಸ್ ಕ್ಯಾಂಪ್‌ಗಳನ್ನು ತಲುಪಲು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮಬಾನ್ ಮೂಲಕ ಹಾದು ಹೋಗುತ್ತಾರೆ.

ಹಿಂದಿನ ಲೇಖನದೇಶದಲ್ಲಿ ಸರ್ವಾಧಿಕಾರ, ಅಘೋಷಿತ ತುರ್ತು ಪರಿಸ್ಥಿತಿ: ಕಾಂಗ್ರೆಸ್ ಆರೋಪ
ಮುಂದಿನ ಲೇಖನದೀರ್ಘಕಾಲಿಕ ಸಂಬಂಧ ಮದುವೆಯೆಂದೇ ಪರಿಗಣನೆ:  ಹುಟ್ಟಿದ ಮಗುವಿಗೂ ಆಸ್ತಿ-ಸುಪ್ರೀಂ ತೀರ್ಪು