ನವದೆಹಲಿ: ಆಮ್ ಆದ್ಮಿ ಪಕ್ಷವು ಮತದಾನೋತ್ತರ ಸಮೀಕ್ಷೆಗಳು ಹೇಳಿದಂತೆ ಪಂಜಾಬ್‌ನಲ್ಲಿ ಕಮಾಲ್ ಮಾಡಿದೆ. ಎರಡನೇ ಯತ್ನದಲ್ಲೇ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಅನ್ನು ಹಿಂದಿಕ್ಕುವ ಮೂಲಕ ಅಧಿಕಾರದ ಗದ್ದುಗೆಯತ್ತ ದಾಪುಗಾಲಿಟ್ಟಿದೆ.
‘ಈ ಫಲಿತಾಂಶವು ಎಎಪಿಯು ಸ್ವಾಭಾವಿಕವಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ’ಎಂದು ಪಂಜಾಬ್‌ನಲ್ಲಿ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ ರಾಘವ್ ಚಡ್ಡಾ ಹೇಳಿದ್ಧಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರೋಧಿ ಬಣದ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಅವರು ಒತ್ತಾಯಿಸಿದ್ಧಾರೆ.ಅಸಾಧಾರಣ ಜಯ: ದೆಹಲಿಯಲ್ಲೂ ಕಳೆದ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲೂ ಅದೇ ರೀತಿಯ ಛಾಪು ಮೂಡಿಸಿದೆ. ಹೀಗಾಗಿ, ಇದನ್ನು ಅಸಾಧಾರಣ ಗೆಲುವು ಎಂದೇ ಹೇಳಲಾಗುತ್ತಿದೆ. 2015ರ ಚುನಾವಣೆಯಲ್ಲಿ ದೆಹಲಿಯ 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ 67 ಕ್ಷೇತ್ರಗಳನ್ನು ಗೆದ್ದಿತ್ತು. ಇದೀಗ ಪಂಜಾಬ್‌ನ 117 ಕ್ಷೇತ್ರಗಳ ಪೈಕಿ 91ರಲ್ಲಿ ಮುನ್ನಡೆ ಪಡೆದಿದೆ.ಬೆಳಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಮೊದಲ ಸ್ಥಾನಕ್ಕೆ ಜಿಗಿದ ಎಎಪಿ ಅದೇ ಟ್ರೆಂಡ್ ಉಳಿಸಿಕೊಂಡಿತ್ತು. 11 ಗಂಟೆ ಹೊತ್ತಿಗೆ 91 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದಕೊಂಡು ಪ್ರಚಂಡ ಗೆಲುವಿನ ಸೂಚನೆ ನೀಡಿತ್ತು. 2017ರಲ್ಲಿ 77 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 13ರಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.