ಮನೆ ಸುದ್ದಿ ಜಾಲ ತಂಬಾಕು ನಿಯಂತ್ರಣ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸೂಚನೆ

ತಂಬಾಕು ನಿಯಂತ್ರಣ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸೂಚನೆ

0

ಮೈಸೂರು: ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ತಂಬಾಕು ನಿಯಂತ್ರಣ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಸುವಂತೆ ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಇಲಾಖೆಯ ಅಧಿಕಾರಿಗಳ ತಂಡವು ನಿಯಮಿತವಾಗಿ ದಾಳಿ ಕೈಗೊಂಡು, ಕೋಟ್ಪಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಯಶಸ್ವಿಗೊಳಿಸಬೇಕು. ನಮ್ಮ ಆರೋಗ್ಯ ನೋಡಿಕೊಳ್ಳುವ ರೀತಿಯಲ್ಲಿಯೇ ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಪೊಲೀಸ್, ಶಿಕ್ಷಣ, ಆರೋಗ್ಯ, ಮಹಾನಗರ ಪಾಲಿಕೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳ ಸೇವನೆಯ ವಿರುದ್ಧ ನಿರಂತರ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಪ್ರಚಾರ ಫಲಕ ಮತ್ತು ಜಾಹಿರಾತುಗಳ ಮೂಲಕ ಪ್ರದರ್ಶಿಸಬೇಕು, ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಂಬಾಕು ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾದ್ಯಂತ ಜಿಲ್ಲಾ ತಂಬಾಕು ನಿಯಂತ್ರಣ ತಂಡದ ವತಿಯಿಂದ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮದಡಿ ದಾಳಿ ನಡೆಸಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧಿಸಿರುವ ಕುರಿತು, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧದ ಬಗ್ಗೆ ಅರಿವು ಮೂಡಿಸಿ, ದಂಡ ವಿಧಿಸುವ ಕೆಲಸ ಮಾಡಬೇಕು ಎಂದು ತಿಳಿಸದರು.

ಶಾಲಾ-ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮತ್ತು ಮಾರಾಟ ನಿಷೇಧವೆಂಬ ನಾಮಫಲಕವನ್ನು ಎಲ್ಲಾ ಶಾಲಾ ಕಾಲೇಜುಗಳು ಕಡ್ಡಾಯವಾಗಿ ಬರೆಸಬೇಕು. ಹಾಗೂ ವರ್ತಕರು/ಚಿಲ್ಲರೆ ವ್ಯಾಪಾರಿಗಳು ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ಮಾರಾಟ ಮಾಡಬಾರದು ಎಂದರು.

ಸಭೆಯಲ್ಲಿ ಸೆಕ್ಷನ್ 4 ತಿಳಿಸಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಿದೆ. ಈ ಕಾಯಿದೆ ಅಡಿಯಲ್ಲಿ 1,218 ಪ್ರಕರಣಗಳು ದಾಖಲಾಗಿದ್ದು 1,34,820 ರೂ. ಗಳಖನ್ನು ಸಂಗ್ರಹಿಸಲಾಗಿದೆ. ಸೆಕ್ಷನ್ 6 ‘ಎ’ ರಲ್ಲಿ 482 ಪ್ರಕರಣಗಳು ದಾಖಲಾಗಿವೆ ಹಾಗೂ 52,300 ರೂ. ಗಳನ್ನು ಸಂಗ್ರಹಿಸಲಾಗಿದೆ. ಸೆಕ್ಷನ್ 6 ‘ಬಿ’ ಯ ಅಡಿಯಲ್ಲಿ 35 ಪ್ರಕರಣಗಳು ದಾಖಲಾಗಿದ್ದು 4,100 ರೂ. ಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ 2022 ರ ಏಪ್ರಿಲ್ ನಿಂದ 2022 ರ ಡಿಸೆಂಬರ್ ವರೆಗೆ 48 ರೈಡ್ ಗಳು ನಡೆದಿದ್ದು 1,735 ಪ್ರಕರಣಗಳು ದಾಖಲಾಗಿವೆ. ಒಟ್ಟು 1,91,220 ರೂ. ಗಳು ಸಂಗ್ರಹಗೊಂಡಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಪ್ರಸಾದ್ ಅವರು ತಿಳಿಸಿದರು.

ತಂಬಾಕಿನಿಂದ ಜೀವನದ ಜೊತೆ ಜೀವವು ಹಾಳಾಗುವುದಲ್ಲದೇ, ಮುಂದಿನ ಪೀಳಿಗೆ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಹಾಗಾಗಿ ತಂಬಾಕು ನಿಯಂತ್ರಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ  ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಕೇಂದ್ರ ಬಜೆಟ್ ರೈತರ ಪಾಲಿಗೆ ನಿರಾಸೆ: ಕುರುಬೂರು ಶಾಂತಕುಮಾರ್
ಮುಂದಿನ ಲೇಖನಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್: ಎಸ್.ಟಿ.ಸೋಮಶೇಖರ್