ಲೂಧಿಯಾನ (ಪಂಜಾಬ್) : ಲೂಧಿಯಾನ ಪಶ್ಚಿಮ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಶಾಸಕ ಗುರುಪ್ರೀತ್ ಗೋಗಿ (58) ನಿನ್ನೆ ತಡರಾತ್ರಿ ತಮ್ಮ ಮನೆಯಲ್ಲಿ ಗುಂಡೇಟಿನಿಂದ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶಾಸಕರ ತಲೆಗೆ ಗುಂಡು ತಗುಲಿದ ನಂತರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಎಎಪಿ ಅಧ್ಯಕ್ಷ ಶರಣ್ಪಾಲ್ ಸಿಂಗ್ ಮಕ್ಕರ್ ಹಾಗೂ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಸಾವನ್ನ ದೃಢಪಡಿಸಿದ್ದಾರೆ.
ಗುರುಪ್ರೀತ್ ಗೋಗಿಗೆ ಗುಂಡು ತಗುಲಿದ ಸುದ್ದಿ ತಿಳಿದ ತಕ್ಷಣ ಪೊಲೀಸ್ ಆಯುಕ್ತರು ಕೂಡಾ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶಾಸಕ ಗುರುಪ್ರೀತ್ ಗೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾರೆಯೋ ಎಂಬುದು ಶವಪರೀಕ್ಷೆ ವರದಿ ಬಂದ ಬಳಿಕ ದೃಢವಾಗಲಿದೆ ಎಂದು ಹೇಳಿದ್ದಾರೆ.















