ಮನೆ ಅಪರಾಧ ಮಂಗಳೂರಿನಲ್ಲಿ ಅಬ್ದುಲ್ ರಹೀಂ ಬರ್ಬರ ಹತ್ಯೆ: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರಿನಲ್ಲಿ ಅಬ್ದುಲ್ ರಹೀಂ ಬರ್ಬರ ಹತ್ಯೆ: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

0

ಮಂಗಳೂರು: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಂಟ್ವಾಳ ಸಮೀಪ ಮುಸ್ಲಿಂ ಯುವಕ ಅಬ್ದುಲ್ ರಹೀಂ (34) ನನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸುವಂತೆ ಮುಸ್ಲಿಮರು ಒತ್ತಾಯಿಸಿ ರಾತ್ರಿಯೇ ಪ್ರತಿಭಟನೆ ನಡೆಸಿದ್ದಾರೆ. ಇಂದಿನಿಂದ ಮೇ 30ರ ಸಂಜೆ 6ಗಂಟೆವರೆಗೂ ಮಂಗಳೂರು ಕಮೀಷನರೇಟ್ ಹಾಗು ಮಂಗಳೂರು ಪೊಲೀಸ್‌ ವ್ಯಾಪ್ತಿಯಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.

ಅಬ್ದುಲ್ ರಹೀಮ್ ಅವರ ಹತ್ಯೆ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಸಂಭವಿಸಿದ್ದು, ಅಪರಿಚಿತ ದುಷ್ಕರ್ಮಿಗಳು ಮರಳಿನ ಲೋಡ್‌ ಕೇಳಿ ಅವರನ್ನು ಇರಾಕೋಡಿಗೆ ಕರೆಸಿಕೊಂಡು, ಮರಳು ಇಳಿಸಿದ ನಂತರ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಮೃತಪಟ್ಟಿದ್ದಾರೆ. ರಹೀಮ್ ಜೊತೆಗಿದ್ದ ಮತ್ತೊಬ್ಬ ಯುವಕ ಕಲಂಧರ್ ಶಾಫಿಗೂ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ. ಅಬ್ದುಲ್ ರಹೀಮ್ ಹತ್ಯೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ್ತೆ ಸಮುದಾಯಗಳ ನಡುವಿನ ಆತಂಕ ಹೆಚ್ಚಿದ್ದು, ಹಿಂದೂ ಮುಖಂಡರು ನೀಡಿರುವ ಪ್ರಚೋದನಕಾರಿ ಹೇಳಿಕೆಗಳು ಈ ಪರಿಸ್ಥಿತಿಗೆ ಕಾರಣವೆಂದು ಕೆಲವರು ಆಕ್ಷೇಪಿಸಿದ್ದಾರೆ.

ಪ್ರತಿಭಟನಾಕಾರರು ರಾತ್ರಿಯೇ ಆಸ್ಪತ್ರೆ ಎದುರು ಜಮಾಯಿಸಿ, ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. “ಅಬ್ದುಲ್ ರಹೀಂ ಅಮಾಯಕರಾಗಿದ್ದು, ಯಾವುದೇ ಸಂಘಟನೆಗೆ ಸಂಬಂಧವಿಲ್ಲ. ಮದುವೆಯಾಗಿದ್ದು, ಎರಡು ಮಕ್ಕಳ ತಂದೆ. ಇಂಥವರ ಹತ್ಯೆ ಒಪ್ಪಲಾಗದು” ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹೇಳಿದ್ದಾರೆ.

ಘಟನೆಯ ಗಂಭೀರತೆಯನ್ನು ಮನಗಂಡಿರುವ ಪೊಲೀಸರು ಮಂಗಳೂರು ನಗರ, ಮಂಗಳೂರು ಗ್ರಾಮಾಂತರ ಮತ್ತು ಬಂಟ್ವಾಳ ಪ್ರದೇಶದಲ್ಲಿ ಮೇ 30ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೆ ತಂದಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಬೇರೆ ಜಿಲ್ಲೆಗಳಿಂದ ಕರೆಸಲಾಗಿದ್ದು, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಅವರು ಇಂದು ಮಂಗಳೂರು ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ.

ಅಂತಿಮ ಸಂಸ್ಕಾರವು ಅಬ್ದುಲ್ ರಹೀಂ ಅವರ ಸ್ವಗ್ರಾಮ ಕೊಳ್ತಮಜಲ್‌ನಲ್ಲಿ ಇಂದು ನೆರವೇರಲಿದೆ. ಜಿಲ್ಲೆಯಲ್ಲಿ ಮತ್ತೆ ಶಾಂತಿ ಹಿಮ್ಮೆಟ್ಟಿರುವ ಈ ಘಟನೆಗೆ ಸಂಬಂಧಿಸಿ ದೋಷಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಎಲ್ಲಾ ಸಮುದಾಯಗಳಿಂದ ಒತ್ತಾಯ ವ್ಯಕ್ತವಾಗುತ್ತಿದೆ.