ಮನೆ ರಾಜ್ಯ 6ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು

6ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು

0

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಮನೆ ಮಾಡಿದೆ. ಸರ್ವಾಲಂಕಾರ ಭೂಷಿತಳಾಗಿ ತಾಯಿ ಚಾಮುಂಡೇಶ್ವರಿ ವಿರಾಜಮಾನಳಾಗುವ ಚಿನ್ನದಂಬಾರಿಯನ್ನು ಇಂದು ಗಜಪಡೆಯ ಕ್ಯಾಪ್ಟನ್‌ ಅಭಿಮನ್ಯು ಹೊತ್ತು ಸಾಗಲಿದ್ದಾನೆ.

ಸತತ 6ನೇ ಬಾರಿಗೆ ಅಂಬಾರಿಯನ್ನು ಹೊತ್ತು ಅಭಿಮನ್ಯು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಅರ್ಜುನ ನಿವೃತ್ತಿ ಬಳಿಕ 2020ರಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ನಿಭಾಯಿಸುತ್ತಿದ್ದಾನೆ.

ದಸರಾ ಗಜಪಡೆಯ ಕ್ಯಾಪ್ಟನ್ ಕೂಲ್ ಎಂದೇ ಅಭಿಮನ್ಯು ಖ್ಯಾತಿ ಹೊಂದಿದ್ದಾನೆ. ಗುರುವಾರ ನಡೆಯಲಿರುವ ಜಂಬೂಸವಾರಿ ಮೆರವಣಿಯಲ್ಲಿ ಅಂಬಾರಿ ಹೊರುವ ಅಭಿಮನ್ಯುವನ್ನು ಮಾವುತ ವಸಂತ ಮುನ್ನಡೆಸಲಿದ್ದಾರೆ. ಯಶಸ್ವಿಯಾಗಿ ಅಭಿಮನ್ಯು ಈ ಬಾರಿಯೂ ಜವಾಬ್ದಾರಿ ನಿರ್ವಹಿಸುವ ವಿಶ್ವಾಸವನ್ನು ಅರಣ್ಯ ಇಲಾಖೆ ವ್ಯಕ್ತಪಡಿಸಿದೆ.

ಅಭಿಮನ್ಯು ಇತಿಹಾಸ – 1977 ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಅಭಿಮನ್ಯು ಆನೆಯನ್ನು ಸೆರೆಹಿಡಿಯಲಾಯಿತು. ಕಳೆದ 25 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. 2015 ರ ವರೆಗೂ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿ ಎಳೆಯುವ ಕೆಲಸ ನಿರ್ವಹಣೆ ಮಾಡಿದ್ದಾನೆ.

ಕಳೆದ 5 ವರ್ಷಗಳಿಂದ ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ನಿರ್ವಹಿಸಿದ್ದಾನೆ. ಕಾಡಾನೆ ಪಳಗಿಸುವ ಸಾಮರ್ಥ್ಯ ಹೊಂದಿರುವ ಆನೆ. ಸುಮಾರು 200 ಕ್ಕೂ ಹೆಚ್ಚು ಕಾಡಾನೆ, 80 ಹುಲಿ ಯಶಸ್ವಿ ಕಾರ್ಯಚರಣೆ ನಡೆದಿದೆ.