ಬೆಳಗಾವಿ(Belagavi): ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಇಂಜಿನಿಯರ್ ಬಿ.ವೈ ಪವಾರ್ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು ನಸುಕಿನ ಜಾವ 3 ಗಂಟೆಯವರೆಗೂ ಬರೊಬ್ಬರಿ 19 ಗಂಟೆ ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ 4 ಎಕರೆ ಕೃಷಿ ಜಮೀನು, ಖಾನಾಪುರದಲ್ಲಿ 4 ಎಕರೆ ಕೃಷಿ ಜಮೀನು, ಮಕ್ಕಳ ಹೆಸರಲ್ಲಿ ನಿಪ್ಪಾಣಿಯಲ್ಲಿ 7 ಎಕರೆ ಜಮೀನು ಖರೀದಿಸಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲೆಯ ವಿವಿಧೆಡೆ 22 ಎಕರೆ 12 ಗುಂಟೆ ಕೃಷಿ ಜಮೀನನ್ನು ಬಿ.ವೈ ಪವಾರ್ ಹೊಂದಿದ್ದಾರೆ.
ಅಲ್ಲದೇ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಒಂದು ಮನೆ, ನಿಪ್ಪಾಣಿಯ ಶಿವಾಜಿ ನಗರದಲ್ಲಿ ಪತ್ನಿ ಹೆಸರಲ್ಲಿ ಒಂದು ಮನೆ, ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಎರಡು ಖಾಲಿ ನಿವೇಶನಗಳು, ನಿಪ್ಪಾಣಿಯಲ್ಲಿ ಒಂದು ನಿರ್ಮಾಣ ಹಂತದ ಪೆಟ್ರೋಲ್ ಬಂಕ್, ನಿಪ್ಪಾಣಿ ತಾಲೂಕಿನ ಬೋರಗಾಂವದಲ್ಲಿ 2 ವಾಣಿಜ್ಯ ಸಂಕೀರ್ಣಗಳು, 900 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಆಭರಣ, ವಿವಿಧ ಕಂಪನಿಯ 3 ದ್ವಿಚಕ್ರ ವಾಹನ, 2 ಕಾರುಗಳು, 8.50 ಲಕ್ಷ ರೂ. ನಗದು, 2 ವಿಮಾ ಪಾಲಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳು, 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.