ಮನೆ ರಾಜ್ಯ ನಾವು ಕೈಕಟ್ಟಿ ಕೂರಲ್ಲ : ಕರಾವಳಿ ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆ ನೀಡುವ ಯಾವುದೇ ಪ್ರಯತ್ನಗಳನ್ನು ಸರ್ಕಾರ...

ನಾವು ಕೈಕಟ್ಟಿ ಕೂರಲ್ಲ : ಕರಾವಳಿ ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆ ನೀಡುವ ಯಾವುದೇ ಪ್ರಯತ್ನಗಳನ್ನು ಸರ್ಕಾರ ಸಹಿಸುವುದಿಲ್ಲ : ಜಿ. ಪರಮೇಶ್ವರ್

0

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಹತ್ಯೆ ಪ್ರಕರಣಗಳು ಹಾಗೂ ಪ್ರಚೋದನಕಾರಿ ಘಟನೆಗಳ ವಿರುದ್ಧ ರಾಜ್ಯ ಸರ್ಕಾರ ತೀವ್ರ ನಿಲುವು ತೆಗೆದುಕೊಂಡಿದ್ದು, “ನಾವು ಕೈಕಟ್ಟಿ ಕೂರಲ್ಲ” ಎಂಬ ತೀರ್ಮಾನವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರುನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹೀಂ ಹತ್ಯೆ ಪ್ರಕರಣ ಹಾಗೂ ಮಂಗಳೂರು ಪೊಲೀಸ್ ಆಯುಕ್ತರ ವರ್ಗಾವಣೆಯ ಹಿನ್ನೆಲೆ ಬಗ್ಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಿದರು. “ಕರಾವಳಿ ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆ ನೀಡುವ ಯಾವುದೇ ಪ್ರಯತ್ನಗಳನ್ನು ಸರ್ಕಾರ ಸಹಿಸುವುದಿಲ್ಲ. ಇಲ್ಲಿ ನಡೆಯುವ ಪ್ರತಿ ಘಟನೆಯನ್ನು ನಾವು ಗಂಭೀರವಾಗಿ ನೋಡುತ್ತಿದ್ದೇವೆ” ಎಂದರು.

ರಹೀಂ ಹತ್ಯೆಯೊಂದಿಗೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮೂರು ಹತ್ಯೆಗಳು ನಡೆದಿದ್ದು, ಇದು ಸಾರ್ವಜನಿಕರಲ್ಲಿ ಭಯ ಮತ್ತು ಅಸ್ಥಿರತೆ ಉಂಟುಮಾಡಿದೆ. ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ ಪರಮೇಶ್ವರ್, “ಈ ರೀತಿ ಹತ್ಯೆಗಳು ಮುಂದುವರಿದರೆ, ಸರ್ಕಾರ ಸಹಿಸಲು ಸಾಧ್ಯವಿಲ್ಲ. ಶಾಂತಿಗೆ ಭಂಗವಾದರೆ, ನಾವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದರು.

ಸಾಮಾಜಿಕ ಒತ್ತಡದ ಕಾರಣಕ್ಕೆ ಅಲ್ಲ, ಆದರೆ ಸುದೀರ್ಘ ಪರಿಶೀಲನೆಯ ನಂತರ ಮಂಗಳೂರು ಪೊಲೀಸ್ ಆಯುಕ್ತರನ್ನು ವರ್ಗಾಯಿಸಲಾಗಿದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟಪಡಿಸಿದರು. “ಅವರು ಹೇಳಿದ ಕೂಡಲೇ ಬದಲಾವಣೆ ಮಾಡಿಲ್ಲ. ಆದರೆ ಈಗ ಪರಿಸ್ಥಿತಿಯ ಅಗತ್ಯಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.

“ನಾನು ಅಲ್ಲಿನ ಸಮುದಾಯದವರ ಜೊತೆ ಮಾತನಾಡಿದ್ದೇನೆ. ಅವರು ಪ್ರಜ್ಞಾವಂತರು. ಆರ್ಥಿಕ, ಶೈಕ್ಷಣಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ. ಜಿಲ್ಲೆಯ ಜನರು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು. ಸರ್ಕಾರವೂ ಈ ಬಗ್ಗೆ ತೀವ್ರವಾಗಿ ಗಮನಹರಿಸುತ್ತಿದೆ. ಪ್ರಚೋದನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಲಾಗುವುದು” ಎಂದು ಭರವಸೆ ನೀಡಿ, ಇಂತಹ ಘಟನೆಗಳ ಮೂಲ ಹುಡುಕುತ್ತಿದ್ದೇವೆ ಎಂದರು.

ಆ್ಯಂಟಿ ಕಮ್ಯುನಲ್ ಫೋರ್ಸ್‌ ರಚನೆ ಬಗ್ಗೆ ಮಾತನಾಡಿದ ಗೃಹ ಸಚಿವರು, “ಇದರ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ. ಶೀಘ್ರದಲ್ಲೇ ಇದನ್ನು ರಚಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು. ಯಾವ ಅಧಿಕಾರಿಗಳಿಗೆ ಯಾವ ಹೊಣೆಗಾರಿಕೆ ನೀಡಬೇಕು ಎಂಬ ಬಗ್ಗೆ ಇನ್ನಷ್ಟು ಚರ್ಚೆಗಳು ನಡೆಯಲಿವೆ.