ಮೈಸೂರು: ಮಾನವ ಕಳ್ಳ ಸಾಗಾಣಿಕೆ ಪ್ರಸ್ತುತ ಕೇವಲ ಭಾರತದ ಸಮಸ್ಯೆಯಾಗಿರದೇ, ಒಂದು ಜಾಗತಿಕ ಸಮಸ್ಯೆಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಭಾವತಿ ಹಿರೇಮಠ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾನೂನು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1956 ರಲ್ಲಿಯೇ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಜಾರಿಗೆ ಬಂದಿದ್ದರು ಸಹ, ಈಗಲೂ ಈ ಪ್ರಕರಣಗಳು ನಡೆಯುತ್ತಲೇ ಇವೆ. 21ನೇ ಶತಮಾನದ ನಾಗರಿಕ ಸಮಾಜದಲ್ಲೂ ವಿವಿಧ ಉದ್ದೇಶಗಳಿಂದ ಜರುಗುವ ಮಾನವ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸುವುದು ಅತ್ಯವಶ್ಯಕವಾಗಿದೆ ಎಂದರು.
ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಪಟ್ಟ10 ಪ್ರಕರಣಗಳಾದರೂ ಇರುತ್ತವೆ. ಕಳೆದ ಒಂದುವರೆ ವರ್ಷದಲ್ಲಿ 664 ಮಕ್ಕಳ ಪ್ರಕರಣಗಳು, ಕಳೆದ ಒಂದು ವರ್ಷದಲ್ಲಿ 584 ಪ್ರಕರಣಗಳು ದಾಖಲಾಗಿದ್ದು ,ಅದರಲ್ಲಿ ಹೆಣ್ಣು ಮಕ್ಕಳ 424 ಪ್ರಕರಣಗಳು ಹಾಗೂ ಗಂಡು ಮಕ್ಕಳ 164 ಪ್ರಕರಣಗಳು ದಾಖಲಾಗಿರುವುದು ಬಹಳ ಆತಂಕಕಾರಿ ವಿಚಾರವಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 175 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ವರದಿಯಾಗಿದ್ದು, ಮನೆ ಬಿಟ್ಟು ಬಂದ ಮಕ್ಕಳ ಸಂಖ್ಯೆ 109, ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ 67 ಪ್ರಕರಣಗಳು, ಬಿಕ್ಷಾಟನೆಯಲ್ಲಿ 48 ಪ್ರಕರಣಗಳು ದಾಖಲಾಗಿದ್ದು, 411 ಪ್ರಕರಣಗಳಲ್ಲಿನ ಮಕ್ಕಳನ್ನು ಅವರ ಪೋಷಕರಿಗೆ ಮಕ್ಕಳ ಕಲ್ಯಾಣ ಸಮಿತಿಯು ಒಪ್ಪಿಸಿರುತ್ತದೆ. 12 ಮಕ್ಕಳನ್ನು ದತ್ತು ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾನವ ಕಳ್ಳ ಸಾಗಾಣಿಕೆಯು ಪ್ರಮುಖವಾಗಿ ಎರಡು ಕಾರಣಗಳಿಂದ ನಡೆಯುತ್ತದೆ. ಜೀತಪದ್ಧತಿ ಅಥವಾ ಬಾಲಕಾರ್ಮಿಕತೆ ಮತ್ತು ಲೈಂಗಿಕ ದುರ್ಬಳಕೆಗಾಗಿ ವ್ಯಕ್ತಿಗಳ ಕಳ್ಳ ಸಾಗಾಣಿಕೆ ನಡೆಯುತ್ತದೆ. ನವ ಕಳ್ಳ ಸಾಗಣಿಕೆಯನ್ನು ತಡೆಯಲು ಮತ್ತು ಸಂತ್ರಸ್ತರಿಗಾಗಿ 9 ವಿವಿಧ ಕಾನೂನುಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡುವುದು, ಅಪರಾಧಿಗಳಿಗೆ ಶಿಕ್ಷೆ ಒದಗಿಸುವುದು ಹಾಗೂ ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ಇತರ ಕಾನೂನು ಸೇವೆಗಳನ್ನು ಒದಗಿಸುವುದಾಗಿದೆ. ಸರ್ಕಾರದ 10 ವಿವಿಧ ಇಲಾಖೆಗಳಲ್ಲಿ 17 ಸ್ಕೀಮ್ಸ್ ಹಾಗೂ ಅಡ್ವೈಸರಿಗಳಿವೆ. ಈ ಇಲಾಖೆಗಳ ಸಹಯೋಗದಲ್ಲಿ ಕೌಶಲ್ಯ ತರಬೇತಿ, ಕೌನ್ಸಿಲಿಂಗ್, ಆತ್ಮಸ್ಥೈರ್ಯ ನೀಡುವ ಕಾರ್ಯಕ್ರಮಗಳನ್ನು ಸಂತ್ರಸ್ತರಿಗೆ ಒದಗಿಸುವ ಕೆಲಸವಾಗುತ್ತದೆ ಎಂದು ತಿಳಿಸಿದರು.
ಮಾನವ ಕಳ್ಳ ಸಾಗಾಣಿಕೆ ಸಂತ್ರಸ್ತರ ಪುನರ್ವಸತಿಗಾಗಿ ಸರ್ಕಾರ ಶ್ರಮಿಸುತ್ತಿದ್ದು, ವಿಕ್ಟಿಮ್ ಸರ್ವಿಸ್ ಅಪ್ರೋಚ್ ಮೂಲಕ ಮಾನವ ಕಳ್ಳ ಸಾಗಾಣಿಕೆಗೆ ತುತ್ತಾದ ವ್ಯಕ್ತಿ ಮೈನರ್ ಆಗಿದ್ದರೆ ಅಥವಾ ಮಹಿಳೆ ಆಗಿದ್ದರೆ ಅವರಿಗೆ ಆಪ್ತ ಸಮಾಲೋಚನೆ, ಪುನರ್ವಸತಿ, ಕಾನೂನಾತ್ಮಕವಾಗಿ ಸಮುದಾಯದಲ್ಲಿ ಪಾಲ್ಗೊಳ್ಳುವಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಜವಾಬ್ದಾರಿಯನ್ನು ಸಹ ಹೊಂದಿದೆ ಎಂದರು.
ಹಿರಿಯ ಸಿವಿಲ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿಜಿ ರವರು ಮಾತನಾಡಿ, ಆರ್ಗನ್ಸ್ ಕಳ್ಳತನ, ಮಾದಕ ವಸ್ತುಗಳ ಸೇವನೆಗೆ, ಲೈಂಗಿಕ ಚಟುವಟಿಕೆಗಳಿಗೆ ಬಿಕ್ಷಾಟನೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ವಿವಿಧ ರೂಪಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಹಲವಾರು ಕಾನೂನುಗಳಿದ್ದರೂ, ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದರೆ ಪ್ರಯೋಜನವಾಗುವುದಿಲ್ಲ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯ ಉದ್ದೇಶವು ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಂಬಂಧಿಸಿದಂತೆ ಮುಂಜಾಗ್ರತೆ ರಕ್ಷಣೆ ಹಾಗೂ ಪುನರ್ವಸತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯತ್ರಿ ಅವರು, ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಮಾನವ ಸಂಪನ್ಮೂಲಗಳ ರಕ್ಷಣೆಯೂ ನಿಮ್ಮ ಜವಾಬ್ದಾರಿಯಾಗಿದೆ. ಮಾನವ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸುವಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದಲ್ಲಿ ಕಾರ್ಯ ನಿರ್ವಹಿಸಬೇಕು. ಈ ಸಂಬಂಧ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಕೆಲಸ ಮಾಡುವುದು ಅತ್ಯಗತ್ಯ ಎಂದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ನಂದಿನಿ ಅವರು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸುವಲ್ಲಿ ಈ ರೀತಿಯ ಕಾರ್ಯಾಗಾರಗಳು ಬಹಳ ಪ್ರಯೋಜನಕಾರಿಯಾಗಿವೆ. ಸಮಾಜದಲ್ಲಿ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ಮೇಲೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುವಲ್ಲಿ ಪಿಡಿಒ ಗಳ ಪಾತ್ರ ಮಹತ್ವದ್ದಾಗಿದ್ದು, ಕಾನೂನಾತ್ಮಕ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ ನ ವಿಲಿಯಂ ಕ್ರಿಸ್ಟೋಫರ್ ಭಾಗವಹಿಸಿದ್ದು, ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಕೃಷ್ಣಂರಾಜು, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಪಿ ಸಿ ಕುಮಾರಸ್ವಾಮಿ, ವಕೀಲರಾದ ಅನಿಲ್ ಸೇರಿದಂತೆ ವಿವಿಧ ತಾಲೂಕುಗಳಿಂದ ಪಿ.ಡಿ.ಓ ಗಳು ಉಪಸ್ಥಿತರಿದ್ದರು.