ಬೆಂಗಳೂರು(Bengaluru): ಮೂರ್ನಾಲ್ಕು ತಿಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಿಡಿಒ, ಕಾರ್ಯದರ್ಶಿ ಗ್ರೇಡ್ ಒಂದು ಮತ್ತು ಎರಡು, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಬಂಡಾರಿ, ಗ್ರಾಮಪಂಚಾಯತ್ ನಲ್ಲಿ 92 ಸೇವೆಗಳನ್ನು ಒದಗಿಸಲಾಗಿದೆ. ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕುಡಿಯುವ ನೀರು, ಲೈಟ್ ಬಿಲ್ ಗೆ, ಶೇ.30ರಷ್ಟು ಅನೈಮರ್ಲೀಕರಣಕ್ಕೆ ಖರ್ಚಾಗಿ, ಉಳಿದ ಶೇ.40ರಷ್ಟ ಮಾತ್ರ ಯೋಜನಾ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಆರಂಭದಲ್ಲಿ ಗ್ರಾಮ ಪಂಚಾಯತ್ ನಲ್ಲಿದ್ದ 20 ಮಾದರಿ ಸೇವೆಗಳು ಈಗ 120ಕ್ಕೆ ಹೆಚ್ಚಳವಾಗಿದೆ. ಆದರೆ ಅಗತ್ಯ ಸಿಬ್ಬಂದಿಗಳಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ಅಧಿಕಾರ ವಿಕೇಂದ್ರೀಕರಣ ಹೆಚ್ಚಾಗಿದೆ. ಜೊತೆ ಪಂಚಾಯತ್ ಇಲಾಖೆಗೆ 30ಕ್ಕೂ ಹೆಚ್ಚು ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಕೆಲ ಕೆಲಸಗಳನ್ನು ಗ್ರಾಮ ಪಂಚಾಯತ್ ನವರೆ ಮಾಡಬೇಕಿದೆ. ಕೆಲ ಪ್ರಮಾಣ ಪತ್ರ, ಸವಲತ್ತು ಮತ್ತು ಪಿಂಚಣಿ ಪಡೆಯಲು ಕಂದಾಯ ಇಲಾಖೆಯಲ್ಲಿ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಪಂಚಾಯತ್ ರಾಜ್ ಇಲಾಖೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ ಎಂದರು.
ಪಂಚಾಯತ್ ರಾಜ್ ಇಲಾಖೆಗೆ ಮಂಜೂರಾಗಿರುವ 6021 ಪಿಡಿಒ ಹುದ್ದೆಗಳ ಪೈಕಿ, 5029 ಮಂದಿ ಕೆಲಸ ಮಾಡುತ್ತಿದ್ದಾರೆ. ಬಡ್ತಿ ಮೂಲಕ 726 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಖಾಲಿ ಉಳಿದ ಇತರೆ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. 326 ಪಿಡಿಒಗಳ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಾರ್ಯದರ್ಶಿ ಗ್ರೆಡ್-1 ಹುದ್ದೆಗಳಲ್ಲಿ 635ಕ್ಕೆ 487 ಹುದ್ದೆಗಳಿಗೆ ನೇರ ನೇಮಕಾತಿ, ಉಳಿದ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಲಾಗುವುದು. ಕಾರ್ಯದರ್ಶಿ ಗ್ರೇಡ್ 2 – 1327 ಹುದ್ದೆಗಳಲ್ಲಿ 556 ಹುದ್ದೆಗಳ ಖಾಲಿ ಇವೆ,300ಕ್ಕೂ ಹೆಚ್ಚು ಹುದ್ದೆಗಳನ್ನು ನೇರ ನೇಮಕಾತಿ, ಉಳಿದವನ್ನು ಬಡ್ತಿ ಮೂಲಕ ನೇಮಿಸಲಾಗುವುದು. 625 ಎಫ್ ಡಿ ಎ ಹುದ್ದೆಗಳ ಪೈಕಿ 124 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಉಳಿದವನು ಬಡ್ತಿ ಮೂಲಕ ನೇಮಿಸಲಾಗುವುದು ಎಂದರು.
ಸೇವೆಗಳು ಹೆಚ್ಚಾದ ಬಳಿಕ ಸಿಬ್ಬಂದಿ ಹೆಚ್ಚಾಗಬೇಕಿದೆ. ಅದಕ್ಕಾಗಿ ಅಮೃತ ಗ್ರಾಮ ಪಂಚಾಯತ್ ಯೋಜನೆ ಜಾರಿ ತರಲಾಗಿದೆ. ಈಗಾಗಲೇ ಗ್ರಾಮ ಪಂಚಾಯತ್ ಯೋಜನೆ ಜಾರಿ ಮಾಡಲಾಗಿದೆ. ಮೊದಲ ಹಂತದಲ್ಲಿ 750 ಗ್ರಾ,ಪಂ.ಗಳು ಆಯ್ಕೆಯಾಗಿದ್ದವು, ಈ ವರ್ಷವೂ 750 ಪಂಚಾಯತ್ ಗಳನ್ನು ಆಯ್ಕೆ ಮಾಡಲಾಗುವುದು. ಅವುಗಳಲ್ಲಿ ಉತ್ತಮ ಕೆಲಸ ಮಾಡಿದ ಪಂಚಾಯತ್ ಗಳಿಗೆ 20 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.