ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅಪಘಾತಕ್ಕೊಳಗಾಗಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಜ.17 ಸೋಮವಾರದಂದು ದಿವ್ಯಾ ಅವರ ಕೈ-ಕಾಲು, ಮುಖಕ್ಕೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಹುಚ್ಚಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಮನೆಗೆ ತೆರಳುವಾಗ ಅಪಘಾತ ನಡೆದಿದೆ.
ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದ ನಟಿ, ಕೆಲವೊಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದರು.ಈಗ ಅಪಘಾತದಲ್ಲಿ ದಿವ್ಯಾ ಅವರ ಮುಖದ ಮೇಲೆ ಗಾಯಗಳಾಗಿದ್ದು, ಚೇತರಿಸಿಕೊಳ್ಳಲು ಕೆಲವೊಂದಿಷ್ಟು ದಿನಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.