ಮನೆ ಮನರಂಜನೆ ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ‘ನಟ ಕಮಲ್ ಸಿನಿಮಾ ರಿಲೀಸ್’ಗೆ ಅವಕಾಶ ಕೊಡಲ್ಲ: ಸಾರಾ ಗೋವಿಂದ್

ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ‘ನಟ ಕಮಲ್ ಸಿನಿಮಾ ರಿಲೀಸ್’ಗೆ ಅವಕಾಶ ಕೊಡಲ್ಲ: ಸಾರಾ ಗೋವಿಂದ್

0

ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ವಿರುದ್ಧ ಕನ್ನಡಪರ ಚಟುವಟಿಕೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ನಡುವೆ ನಿರ್ಮಾಪಕ ಸಾರಾ ಗೋವಿಂದ್ ಬಿಗುವಾದ ಎಚ್ಚರಿಕೆ ನೀಡಿದ್ದು, ಅವರು ಕ್ಷಮೆ ಕೇಳದಿದ್ದರೆ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಫಿಲ್ಮ್ ಚೇಂಬರ್ ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಸಾರಾ ಗೋವಿಂದ್, “ನಟ ಕಮಲ್ ಹಾಸನ್ ಬಹಿರಂಗ ಕ್ಷಮೆ ಕೇಳಬೇಕು. ಅವರು ಇಂದು ಅಥವಾ ನಾಳೆ ಈ ಬಗ್ಗೆ ಸ್ಪಷ್ಟನೆ ನೀಡದೇ ಹೋದರೆ ಅವರ ಹೊಸ ಸಿನಿಮಾ ‘ಥಗ್ ಲೈಫ್’ ನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ತಡೆಯನ್ನು ಎದುರಿಸಬೇಕಾಗುತ್ತದೆ” ಎಂದರು.

“ನಮಗೆ ಯಾರಿಗೂ ಕಮಲ್ ಹಾಸನ್ ಬಗ್ಗೆ ಕನಿಕರ ಇಲ್ಲ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಇದಕ್ಕೆ ಕ್ಷಮೆ ಕೇಳುವುದು ಕಡ್ಡಾಯ” ಎಂದು ಹೇಳಿದರು.

ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಕೂಡ ಈ ವಿಚಾರದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಅವರು ಅಭಿನಯಿಸಿರುವ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸುವಂತೆ ಒತ್ತಾಯವಿದೆ. ನಾವು ಕೂಡಾ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಮಲ್ ಹಾಸನ್ ತಮ್ಮ ತಪ್ಪು ಅರಿತು, ಕನ್ನಡಿಗರಿಂದ ಕ್ಷಮೆ ಕೇಳುವಂತೆ ಮನವಿ ಮಾಡಲಾಗುತ್ತಿದೆ” ಎಂದರು.

ಇನ್ನೊಂದು ಕಡೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಸಕ್ರಿಯವಾಗಿ ನಿಲ್ಲುವುದಾಗಿ ಸಾರಾ ಗೋವಿಂದ್ ಸೇರಿದಂತೆ ಇತರರು ಸ್ಪಷ್ಟಪಡಿಸಿದ್ದಾರೆ. ‘ಥಗ್ ಲೈಫ್’ ಚಿತ್ರದ ಬಿಡುಗಡೆ ಇನ್ನು ಮುಂದೆ ಕಮಲ್ ಹಾಸನ್ ಅವರ ಸ್ಪಷ್ಟನೆ ಮತ್ತು ಕ್ಷಮೆಯ ಮೇಲೆಯೇ ನಿಂತಿದೆ.