ಮನೆ ಮನರಂಜನೆ ನಟ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷ

ನಟ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷ

0

ನಟ ‘ಕಿಚ್ಚ’ ಸುದೀಪ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷಗಳು  ತುಂಬಿರುವ ಹಿನ್ನೆಲೆಯಲ್ಲಿ  ಟ್ವೀಟ್‌ ಮಾಡಿರುವ ಸುದೀಪ್‌ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

1997ರಲ್ಲಿ ಸುದೀಪ್‌ ನಟಿಸಿದ ‘ತಾಯವ್ವ’ ತೆರೆಕಂಡಿತ್ತು. ವಿ.ಉಮಾಕಾಂತ್ ನಿರ್ದೇಶನದ ಚಿತ್ರದಲ್ಲಿ ಉಮಾಶ್ರೀ, ಚರಣ್ ರಾಜ್, ರಮೇಶ್ ಭಟ್ ಮೊದಲಾದವರು ನಟಿಸಿದ್ದರು.

ಅದಕ್ಕೂ ಮೊದಲು ‘ಬ್ರಹ್ಮ’ ಮತ್ತು ‘ಓ ಕುಸುಮ ಬಾಲೆ’ ಸಿನಿಮಾಗಳಲ್ಲಿ ಸುದೀಪ್‌ ನಟಿಸಿದ್ದರು. ಆದರೆ ಆ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಖಂಡಿತವಾಗಿಯೂ ಇದೊಂದು ಸ್ಮರಣೀಯ ಪಯಣವಾಗಿದೆ. ಚಿತ್ರರಂಗದಲ್ಲಿ 27 ವರ್ಷಗಳ ಕಾಲ ಹಲವಾರು ಅದ್ಭುತ ಪ್ರತಿಭೆಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ. ನನಗೆ ಸ್ಫೂರ್ತಿ ನೀಡಿದ, ನನ್ನಲ್ಲಿನ ಸಾಮರ್ಥ್ಯವನ್ನು ಇನ್ನೂ ಉತ್ತಮವಾಗಿಸಿಕೊಳ್ಳಲು ಸಹಕಾರ ನೀಡಿದ ಎಲ್ಲ ಪ್ರತಿಭೆಗಳಿಗೆ ಧನ್ಯವಾದ. ನನ್ನ ಬೆನ್ನಿಗೆ ನಿಂತ ಎಲ್ಲ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ಎಂದು ಕಿಚ್ಚ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನನಗೆ ಎಲ್ಲ ಆಶಿರ್ವಾದ ಸಿಕ್ಕಿದೆ. ಜತೆಗೆ ಎಲ್ಲರ ಪ್ರೀತಿಯೂ ಲಭಿಸಿದೆ. ನನಗೆ ಅವಕಾಶಗಳನ್ನು ನೀಡಿದ ಕನ್ನಡ ಚಿತ್ರರಂಗಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳ ಸ್ನೇಹಿತರಿಗೆ ಧನ್ಯವಾದ ಹೇಳದಿದ್ದರೆ ಅಪೂರ್ಣ ಎನಿಸುತ್ತದೆ ಎಂದು ಸುದೀಪ್‌ ಬರೆದುಕೊಂಡಿದ್ದಾರೆ.

‘ತಾಯವ್ವ’ ಸಿನಿಮಾದಲ್ಲಿ ರಾಮು ಪಾತ್ರದ ಮೂಲಕ ಸಿನಿಮಾ ಜಗತ್ತಿಗೆ ಬಂದ ಸುದೀಪ್‌ ಗುರುತಿಸಿಕೊಂಡಿದ್ದು ‘ಸ್ಪರ್ಶ’ ಚಿತ್ರದಿಂದ. ಮಾಸ್‌ ನಟನ ಪಟ್ಟ ನೀಡಿದ್ದು ‘ಹುಚ್ಚ’ ಸಿನಿಮಾ. ಅದಾದ ಬಳಿಕ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರು.

‘ಮೈ ಆಟೋಗ್ರಾಫ್‌’ ಸಿನಿಮಾದ ಮೂಲಕ ನಿರ್ದೇಶಕರಾದರು. ರಾಜಮೌಳಿಯ ‘ಈಗ’ ಚಿತ್ರದಿಂದ ಪರಭಾಷಾ ಚಿತ್ರರಂಗಕ್ಕೂ ಸುದೀಪ್‌ ಪರಿಚಿತರಾದರು.

ವಿಕ್ರಾಂತ್‌ ರೋಣ ಚಿತ್ರದ ಬಳಿಕ ಸುದೀಪ್‌ ತಮ್ಮ ಹೊಸ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಅವರ ಮುಂದಿನ ಸಿನಿಮಾ ಘೋಷಣೆಗೆ ಕಾಯುತ್ತಿದ್ದಾರೆ.

ನಿರ್ದೇಶಕ ನಂದಕಿಶೋರ್‌ ಜತೆ ಕೆಆರ್‌’ಜಿ ನಿರ್ಮಾಣದ ಚಿತ್ರವೇ ಕಿಚ್ಚ ಮುಂದಿನ ಚಿತ್ರವಾಗುವ ಸಾಧ್ಯತೆ ಹೆಚ್ಚಾಗಿದೆ.