ಮೈಸೂರು: ಅಡ್ಡಂಡ ಕಾರ್ಯಪ್ಪ ಅರ್ಜೆಂಟ್ ಆಗಿ ಎಂಎಲ್’ಸಿ ಆಗಬೇಕು. ಅದಕ್ಕಾಗಿ ಸಾಂಸ್ಕೃತಿಕ ನಗರಿಯನ್ನು ಬೇರೆ ಬೇರೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಬಹಳ ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಮೈಸೂರು ರಂಗಾಯಣದಲ್ಲಿ ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಂತಹ ಹೆಸರಿಟ್ಟುಕೊಂಡು ಅಡ್ಡಂಡ ಕಾರ್ಯಪ್ಪ ಅಪಮಾನ ಮಾಡುತ್ತಿದ್ದಾರೆ. ಇನ್ನೂ ಮುಂದೆ ಕಾರ್ಯಪ್ಪ ಅನ್ನುವ ಹೆಸರನ್ನು ತೆಗೆದು ಬಿಡಿ. ಅಡ್ಡಂಡನಿಂದ ಕೊಡಗಿಗೆ ಅವಮಾನವಾಗಿದೆ.ಆತನಿಗೆ ಎಂಎಲ್’ಸಿ ಆಗಲು ಬಹಳ ಅರ್ಜೆಂಟ್ ಆಗಿದೆ ಅದಕ್ಕಾಗಿ ಆರ್’ಎಸ್’ಎಸ್ ವಿಚಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಅಡ್ಡಂಡ ಕಾರ್ಯಪ್ಪನೊಂದಿಗೆ ಸಾಹಿತಿ ಭೈರಪ್ಪ ಸೇರಿರುವುದು ಸೂಕ್ತವಲ್ಲ. ಸಾಹಿತ್ಯ ಲೋಕದ ಎತ್ತರದ ವ್ಯಕ್ತಿ ಇವರ ಜೊತೆ ಸೇರಿರುವುದು ವಿಷಾಧನೀಯ. ಭೈರಪ್ಪಗೆ ಅರ್ಜೆಂಟ್ ಆಗಿ ಜ್ಞಾನ ಪೀಠ ಬೇಕಿದೆ ಅನ್ನಿಸುತ್ತಿದೆ ಕೊಟ್ಟು ಬಿಡಿ ಎಂದರು.
ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ:
ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ವಿರುದ್ಧ ಅ ಆ ಇ ಈ ಪ್ರಾರಂಭಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿಸಿದ ಹಾಗೆ ತಂತ್ರ ಹೆಣೆಯುವ ಕಾರ್ಯಕ್ಕೆ ಈಗೀಗ ಪ್ರಾರಂಭವಾಗುತ್ತಿದೆ. ಆದರೆ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲಲಿದ್ದಾರೆ. ಕೋಲಾರದಲ್ಲಿ ಸ್ಪರ್ಧೆಸಿದರೂ ಗೆಲ್ಲಲಿದ್ದಾರೆ ಎಂದು ಸಿದ್ದರಾಮಯ್ಯ ಪರ ಮಾತನಾಡಿದರು.
ಹಣಕಾಸು ಇಲಾಖೆಗೆ ಸಚಿವರನ್ನು ನೇಮಿಸಲಿ:
ಸಿಎಂ ಕೂಡಲೇ ಹಣಕಾಸು ಇಲಾಖೆಗೆ ಸಚಿವರನ್ನು ನೇಮಿಸಬೇಕು. ಸಿಎಂ ಬಳಿ 8 ರಿಂದ 10 ಇಲಾಖೆಗಳಿವೆ. ಯಾವ ಯಾವ ಇಲಾಖೆಗಳು ಸಿಎಂ ಬಳಿ ಇರುತ್ತದೆಯೋ ಅದು ಸತ್ತು ಹೋಗುತ್ತದೆ. ಈ ಹಿಂದೆ ದೇವರಾಜ ಅರಸು, ವೀರಪ್ಪ ಮೊಯ್ಲಿ ಅಂತವರು ಹಣಕಾಸು ಖಾತೆಯನ್ನು ತಾವೇ ನಿಭಾಯಿಸದೆ ಇತರರಿಗೆ ನೀಡಿದ್ದರು. ಹಣಕಾಸು ಖಾತೆ ನಿಭಾಯಿಸಲು ಹೆಚ್ಚು ಸಮಯಬೇಕು. ಆದರೆ ಸಿಎಂಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸಿಎಂ ತಮ್ಮ ಬಳಿ ಇರುವ ಹಣಕಾಸು ಖಾತೆಯನ್ನ ಬೇರೆಯವರಿಗೆ ನೀಡಬೇಕು ಎಂದು ಸಲಹೆ ನೀಡಿದರು.