ಆಸನದ ಹೆಸರೇ ಸೂಚಿಸುವಂತೆ ಯೋಗಾಭ್ಯಾಸಿಯ ಮುಖವು ಈ ಆಸನದಲ್ಲಿ ‘ಅಧಃ’ ಅಂದರೆ ಕೆಳಗೆ ಇರುತ್ತದೆ.
ಮಾಡುವ ಕ್ರಮ
1) ಪ್ರಾರಂಭದಲ್ಲಿ ಯೋಗಾಭ್ಯಾಸಿಯೂ ಸುಮಾರು ಒಂದು – ಒಂದೂವರೆ ಅಡಿ ದೂರದಲ್ಲಿ ಗೋಡೆಯ ಎದುರಿಗೆ ನಿಲ್ಲಬೇಕು.
2) ಅನಂತರ ಈ ಹಿಂದೆ ತಿಳಿಸಿದಂತೆ ಪಾದಹಸ್ತಾಸನ ಮಾಡಬೇಕು. (ಅಂದರೆ ಮೊಣಕಾಲುಗಳನ್ನು ಬಗ್ಗಿಸದೆ ಎರಡೂ ಕೈಗಳನ್ನು ನೆಲದಲ್ಲಿ ಊರಬೇಕು – 24ನೇ ಕ್ರಮಾಂಕದ ಯೋಗಾಸನದ ಚಿತ್ರದಲ್ಲಿರುವಂತೆ).
3) ಅನಂತರ ಕೈಗಳನ್ನು ಬಗ್ಗಿಸದೇ, ನಿಧಾನವಾಗಿ ಇಡೀ ಶರೀರದ ಭಾರವನ್ನು ಕೈಗಳ ಮೇಲೆ ಹೊರಿಸಲು ಎರಡೂ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಿ ಗೋಡೆಯ ಕಡೆಗೆ ಬೀಸಬೇಕು. ಈ ಸ್ಥಿತಿಯಲ್ಲಿ ಶರೀರದ ಭಾರ ಕೈಗಳ ಮೇಲಿರುತ್ತದೆ ಹಾಗೂ ಪ್ರಾರಂಭದಲ್ಲಿ ಕಾಲು ಗೋಡೆಗೆ ತಗುಲಿರುತ್ತದೆ. ಕ್ರಮೇಣ ಕಾಲುಗಳನ್ನು ಗೋಡೆಯಿಂದ ದೂರವಿರಿಸಬೇಕು. ಸಮತೋಲನ ಪಡೆಯದ ಹೊರತು ಕಾಲುಗಳನ್ನು ಗೋಡೆಯಿಂದ ಬೇರ್ಪಡಿಸಬಾರದು ಮತ್ತು ಕೈಗಳನ್ನು ಎಂದೂ ಬಗ್ಗಿಸಬಾರದು. ಒಂದು ವೇಳೆ ಕೈಗಳನ್ನು ಬಗ್ಗಿಸಿದಲ್ಲಿ ಶರೀರದ ಭಾರವನ್ನು ಅವು ತಡೆಯಲಾರದೆ ದೇಹ ನೆಲಕ್ಕೆ ಕುಸಿಯುತ್ತದೆ. ಈ ಅಪಾಯವನ್ನು ಅರಿತು ಅಧೋಮುಖ ವೃಕ್ಷಾಸನವನ್ನು ಅಭ್ಯಾಸಮಾಡಬೇಕು. ಈ ಆಸನದ ಪೂರ್ಣಸ್ಥಿತಿಯಲ್ಲಿ ಇಡೀ ಶರೀರವು ಭೂಮಿಗೆ ಲಂಬವಾಗಿರುತ್ತದೆ.
ಲಾಭಗಳು:
ಅಧೋಮುಖ ವೃಕ್ಷಾಸನದ ಅಭ್ಯಾಸದಿಂದ ಹೆಗಲು, ತೋಳು ಮತ್ತು ಕೈ ಮಣಿಕಟ್ಟುಗಳು ಬಲಗೊಳ್ಳುತ್ತವುವು. ಎದೆಯನ್ನು ಹಿಗ್ಗಿಸುವುದು. ದೇಹದ ಸರ್ವತೋಮುಖ ಬೆಳವಣಿಗೆಗೆ ಈ ಆಸನ ಹೆಚ್ಚು ಸಹಕಾರಿ.