ಬೆಂಗಳೂರು: ಏರೋನಿಕ್ಸ್ ಇಂಟರ್ ನೆಟ್ ಕಂಪನಿ (ಏರೋನಿಕ್ಸ್ ಮೀಡಿಯಾ ಸಂಸ್ಥೆ) ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್ ಅವರ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆ ಚಿಕ್ಕನಹಳ್ಳಿ ನಿವಾಸಿ, ಟಿಕ್ ಟಾಕ್ ಸ್ಟಾರ್ ಶಬರಿಷ್ ಅಲಿಯಾಸ್ ಫಿಲಿಕ್ಸ್ (27), ರೂಪೇನಾ ಅಗ್ರಹಾರದ ವಿನಯ್ ರೆಡ್ಡಿ (23) ಹಾಗೂ ಮಾರೇನಹಳ್ಳಿ ಸಂತು ಅಲಿಯಾಸ್ ಸಂತೋಷ್ ಬಂಧಿತ ಆರೋಪಿಗಳು.
ಇಬ್ಬರನ್ನು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿ, ಕುಣಿಗಲ್ ನಲ್ಲಿ ತಲೆಮರೆಸಿಕೊಂಡಿದ್ದರು. ಮೂವರನ್ನು ಬಂಧಿಸಿರುವ ಪೊಲೀಸರು ಬೆಂಗಳೂರಿಗೆ ಕರೆ ತರುತ್ತಿದ್ದಾರೆ.
ಅಮೃತಹಳ್ಳಿಯ ಪಂಪ ಬಡಾವಣೆಯ 6ನೇ ಅಡ್ಡ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಗೆ ಮಂಗಳವಾರ ಸಂಜೆ ನುಗ್ಗಿದ್ದ ಮೂವರು ಆರೋಪಿಗಳು ಕೊಲೆ ಮಾಡಿದ್ದರು.
ಕೊಲೆ ಮಾಡಿದ ಬಳಿಕ ಕಚೇರಿಯ ಹಿಂದಿನ ಬಾಗಿಲಿನ ಮೂಲಕ ಓಡಿ ಹೋಗಿದ್ದರು. ಕಚೇರಿಯ ಸಿಬ್ಬಂದಿಯೇ ಫಣೀಂದ್ರ ಹಾಗೂ ವಿನುಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.