ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬ ಆಚರಿಸಿ, ಖುಷಿಯಲ್ಲಿ ಕೇಕ್ ಕತ್ತರಿಸಿ ಬಳಿಕ ಆಕೆಯ ಕುತ್ತಿಗೆಯನ್ನ ಕೊಯ್ದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ನವ್ಯ (24) ಕೊಲೆಯಾದ ಯುವತಿ. ಪ್ರಶಾಂತ್ ಕೊಲೆಗೈದ ಪ್ರಿಯಕರ.
ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ, ಕಳೆದ ಆರು ವರ್ಷಗಳಿಂದ ದೂರದ ಸಂಬಂಧಿ ಪ್ರಶಾಂತ್ ಎಂಬುವವನನ್ನ ಪ್ರೀತಿಸುತ್ತಿದ್ದಳು.
ಕಳೆದ ಮಂಗಳವಾರ ನವ್ಯ ಬರ್ತಡೇ ದಿನ ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ(ಏ.14) ಬರ್ತಡೇ ಸೆಲೆಬ್ರೇಷನ್ಗೆ ಪ್ಲಾನ್ ಮಾಡಿ ಅದರಂತೆ ರಾತ್ರಿ ಕೇಕ್ ಕಟ್ ಮಾಡಿ ಕೇಕ್ ತಿನ್ನಿಸಿದ್ದ. ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಇನ್ನು ಮೃತ ಯುವತಿಯ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇತ್ತೀಚೆಗೆ ಮೃತ ಯುವತಿ ಬೇರೆಯವರ ಜೊತೆ ಚಾಟಿಂಗ್ ಮಾಡುತ್ತಾ ಇದ್ದಳು ಎಂದು ಪ್ರಶಾಂತ್ ಅನುಮಾನಿಸಿದ್ದನಂತೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಪದೇ ಪದೇ ಜಗಳ ಆಗುತ್ತಿಂತೆ. ಇದೀಗ ಅನುಮಾನದ ಮೇಲೆ ಬರ್ತಡೇ ಆಚರಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.