ಮೈಸೂರು(Mysuru): ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ಟನ್’ಗೆ 3050 ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ ಇದನ್ನ ವಿರೋಧಿಸಿ ಪುನರ್ ಪರಿಶೀಲನೆಗಾಗಿ ಒತ್ತಾಯಿಸಿ ಸೆ. 26 ರಂದು ವಿಧಾನಸೌಧ ಚಲೋ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ತಾಲೂಕು, ಜಿಲ್ಲಾಧಿಕಾರಿಗಳ, ಕಚೇರಿಗಳ ಮುಂದೆ ಪ್ರತಿಭಟನ ನಡೆಸಲಾಗಿದೆ. ಆ. 12ರಂದು ರಾಜ್ಯಾದ್ಯಂತ ರಸ್ತೆತಡೆ ಚಳವಳಿ ನಡೆಸಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗಿದೆ, ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ ಧೋರಣೆ ತಾಳಿದೆ. ಇದು ರಾಜ್ಯದ ರೈತರಿಗೆ ಮಾಡಿದ ಅವಮಾನ, ಸರ್ಕಾರದ ನಿರ್ಲಕ್ಷತನ ಖಂಡಿಸಿ ರೈತರಿಂದ ಬೃಹತ್ ಸಂಖ್ಯೆಯಲ್ಲಿ ಬೆಂಗಳೂರು ವಿಧಾನಸೌಧ ಚಲೋ, ನಿರಂತರ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಶ್, ಡಿಎಪಿ, ಏರಿಕೆಯಾಗಿದೆ ಕಟಾವು ಕೂಲಿ ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ, ಆದರೆ ಕೇಂದ್ರ ಸರ್ಕಾರ ಟನ್ಗೆ 3050 ನಿಗದಿ ಮಾಡಿ ದ್ರೋಹ ಬಗೆದಿದೆ, ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ ಈ ದರ ಪುನರ್ ಪರಿಶೀಲನೆ ಆಗಲೇಬೇಕು ಎಂದು ಒತ್ತಾಯಿಸಿದರು.
ಕಬ್ಬಿನಿಂದ ಬರುವ ಸಕ್ಕರೆ ಇಳುವರಿ 10.25 ಕೆ ಏರಿಕೆ ಮಾಡಿ ಕಬ್ಬು ಬೆಳೆ ರೈತರಿಗೆ ಮತ್ತೊಂದು ದ್ರೋಹ ಬಗೆದಿದೆ, ಇದರಿಂದ ರೈತರಿಗೆ ಟನ್’ಗೆ 75 ರೂ ಕಡಿತವಾಗುತ್ತದೆ, ಉತ್ತರಪ್ರದೇಶ ಸರ್ಕಾರದ ಮಾನದಂಡದಂತೆ ಕನಿಷ್ಠ 3500 ರೂ ನಿಗದಿ ಆಗಲೇಬೇಕು,ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿದು ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡಲು ಸಂಸತ್ತಿನಲ್ಲಿ ಮಂಡನೆ ಮಾಡಿದೆ. ಇದನ್ನು ರಾಜ್ಯದ 38 ಲಕ್ಷ ಕೃಷಿ ಪಂಶೆಟ್ ರೈತರು ವಿರೋಧಿಸುತ್ತೇವೆ, ರೈತರಿಗೆ ಕೃಷಿ ಪಂಪ್’ಸೆಟ್’ಗಳಿಗೆ ನೀಡುವ ಉಚಿತ ವಿದ್ಯುತ್ತನ್ನು ನಿಲ್ಲಿಸುವ ಹುನ್ನಾರದಿಂದ ಸಂಸತ್ತಲ್ಲಿ 2022 ವಿದ್ಯುತ್ ಬಿಲ್ ಮಂಡಿಸಲಾಗಿದೆ, ಈಗಾಗಲೇ ತಮಿಳುನಾಡು, ತೆಲಂಗಾಣ, ಆಂಧ್ರ,ಪಂಜಾಬ್, ಕೇರಳ ಬಿಹಾರ್ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ ಅದರಂತೆ ಕರ್ನಾಟಕ ರಾಜ್ಯವು ಕೂಡ ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು, ಕರ್ನಾಟಕದ ರೈತರನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಕೃಷಿ ಸಾಲ ನೀಡುವಾಗ, ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣನೆ ಮಾಡಿ ಸಾಲ ನೀಡಬೇಕೆ, ಬೇಡವೇ, ಎಂಬ ನೀತಿ ಅನುಸರಿಸುತ್ತಿವೆ, ಇದನ್ನು ರದ್ದುಗೊಳಿಸಬೇಕು ಎಂದು ಆರ್ ಬಿ ಐ ಮುಂದೆ ಪ್ರತಿಭಟನೆ ನಡೆಸಿದಾಗ, ಈ ಬಗ್ಗೆ ಬ್ಯಾಂಕುಗಳ ಮುಖ್ಯಸ್ಥರು ಹಾಗೂ ರೈತ ಮುಖಂಡರ ಸಭೆ ಕರೆದು ಚರ್ಚಿಸುವುದಾಗಿ ಬರವಸೆ ನೀಡಿದ ಕರ್ನಾಟಕ ವಲಯದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥರು ಭರವಸೆ ಹುಸಿಗೊಳಿಸಿದ್ದಾರೆ,ಇದು ರೈತರಿಗೆ ಮಾಡಿದ ಅಪಮಾನ ಆದ್ದರಿಂದ ಅಂದು ಆರ್ ಬಿ ಐ ಕಚೇರಿಗೂ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಿ ಸೋಮಶೇಖರ್ ಹಳ್ಳಿಕೆರೆಹುಂಡಿ ಭಾಗ್ಯರಾಜ್, ನಾಗರಾಜ್, ಸಿದ್ದೇಶ್, ಮಾದಪ್ಪ, ಮಹದೇವಸ್ವಾಮಿ, ದೇವಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.