ನವದೆಹಲಿ (New Delhi): ಕೇಂದ್ರ ರಕ್ಷಣಾ ಸಚಿವಾಲಯ ತಂದಿರುವ ಭಾರತೀಯ ಮಿಲಿಟರಿಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.
ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಹಿರಿಯ ಅಧಿಕಾರಿಗಳು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಯುವಶಕ್ತಿಯನ್ನು ಹೆಚ್ಚಿಸಲು ಇರುವ ಏಕೈಕ ಪ್ರಗತಿಪರ ಹೆಜ್ಜೆ ಇದು ಎಂದಿದ್ದಾರೆ.
ಅಗ್ನಿಪಥ್ ಯೋಜನೆಯನ್ನು ಏಕೆ ಹಿಂತೆಗೆದುಕೊಳ್ಳಬೇಕು. ದೇಶವನ್ನು ಯುವಶಕ್ತಿಯನ್ನಾಗಿಸಲು ಅದೊಂದೇ ಪ್ರಗತಿಪರ ಹೆಜ್ಜೆಯಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಈ ಯೋಜನೆ ಮುಖ್ಯವಾಗಿದೆ. ನಮ್ಮ ದೇಶದ ಅತಿ ಎತ್ತರದ ಪ್ರದೇಶಗಳಲ್ಲಿ ನೇಮಕಗೊಂಡಿರುವ ಮಿಲಿಟರಿ ಸಿಬ್ಬಂದಿಗಳು ಅನಾರೋಗ್ಯ ಕಾರಣದಿಂದ ಎಷ್ಟು ಮಂದಿ ಸಾಯುತ್ತಾರೆ ಎಂದು ನಿಮಗೆ ಗೊತ್ತಿದೆಯೇ, ಅದರ ಬಗ್ಗೆ ತಿಳಿದುಕೊಳ್ಳಿ ಆಗ ನಿಮಗೆ ಮಿಲಿಟರಿಯಲ್ಲಿ ಯುವಕರ ಅಗತ್ಯ ಎಷ್ಟಿರುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.
ಮಿಲಿಟರಿ ಪಡೆಗೆ ಸೇರಲಿಚ್ಛಿಸುವ ಯುವಕರು ತಾವು ಪ್ರತಿಭಟನೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಶೇ.100ರಷ್ಟು ಪೊಲೀಸ್ ಪರಿಶೀಲನೆಯೊಂದಿಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ ಎಂದು ಸಹ ಹೇಳಿದರು.
ಭಾರತೀಯ ಸೇನೆಯ ಅಡಿಪಾಯ ಶಿಸ್ತು. ಬೆಂಕಿ ಹಚ್ಚುವುದು, ವಿಧ್ವಂಸಕ ಕೃತ್ಯಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ. ಪೊಲೀಸ್ ಪ್ರಮಾಣಪತ್ರ ನೂರಕ್ಕೆ ನೂರು ಸರಿಯಾಗಿರುತ್ತದೆ. ಪ್ರಮಾಣಪತ್ರ ಇಲ್ಲದಿದ್ದರೆ ಸೇನೆ ಸೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕಳೆದ ಜೂನ್ 14ರಂದು ಮಿಲಿಟರಿಯಲ್ಲಿ ಯುವಕರನ್ನು ನೇಮಕಾತಿ ಮಾಡುವ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದ್ದು, ವಾಯುಸೇನೆಗೆ ಜೂನ್ 24ರಂದು ನೇಮಕಾತಿ ಆರಂಭವಾಗಲಿದೆ. ಈ ಮಧ್ಯೆ ಅಗ್ನಿಪಥ ಯೋಜನೆ ವಿರುದ್ಧ ಹಲವೆಡೆ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ.