ಮನೆ ರಾಜ್ಯ ರೈತ ದಸರಾ‌ ಮೆರವಣಿಗೆಯನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ರೈತ ದಸರಾ‌ ಮೆರವಣಿಗೆಯನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

0

ಮೈಸೂರು(Mysuru): ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ರೈತ ದಸರಾ ಮೆರವಣಿಗೆ ಕಾರ್ಯಕ್ರಮವನ್ನು ಕೃಷಿ‌ ಸಚಿವರಾದ ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು.

ನಗರದ ಕೋಟೆ ಆಂಜನೇಯ ಸ್ವಾಮಿ ಮುಂಭಾಗ ಆಯೋಜಿಸಲಾಗಿದ್ದ ರೈತರ ದಸರಾ‌ ಮೆರವಣಿಗೆ ಕಾರ್ಯಕ್ರಮವನ್ನು ನಂದಿ‌ ಪೂಜೆಯೊಂದಿಗೆ  ಹಾಗೂ ನಗಾರಿ ಬಾರಿಸುವ ಮೂಲಕ ಚಾಲನೆ‌ ನೀಡಿದರು.

ಬಳಿಕ ಮಾತನಾಡಿದ ಅವರು, ರೈತರು ದೇಶದ ಬೆನ್ನೆಲುಬಾಗಿದ್ದು, ರೈತರಿಲ್ಲದೇ ನಾವ್ಯಾರು ಇರುವುದಿಲ್ಲ. ರೈತನಿದ್ದರೆ ಜಗತ್ತು, ರೈತನಿದ್ದರೆ ಊಟ, ರೈತನಿದ್ದರೆ ಬದುಕು.. ಅಂತಹ ರೈತ ದಸರಾವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ದಸರಾ ಹಬ್ಬದ ಅಂಗವಾಗಿ‌ ಪ್ರತಿ‌ ತಾಲ್ಲೂಕಿನಲ್ಲೂ ರೈತ ದಸರಾ ಚಾಲನೆಯಾಗಿದ್ದು, ಬಹಳ ವ್ಯವಸ್ಥಿತವಾಗಿ ಆಚರಣೆ‌ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಬಳಿಕ ಎತ್ತಿನಗಾಡಿಯ ಮೆರವಣಿಗೆಯಲ್ಲಿ ಸಚಿವರು ಸಾಗುವ ಮೂಲಕ ಜಾನಪದ ವೈವಿಧ್ಯಮಯ ಕಲಾತಂಡಗಳ ಮೂಲಕ ರೈತ ದಸರಾ ಮೆರವಣಿಗೆ ಸಾಗಿತು..

ಇದರೊಂದಿಗೆ ನಂದಿ ಧ್ವಜ, ಪೂರ್ಣಕುಂಭ, ಟಿಬೇಟಿಯನ್ ನೃತ್ಯ, ವೀರಗಾಸೆ, ಗಿರಿಜನರ ನೃತ್ಯ, ಕಂಸಾಳೆ, ಕೀಲುಗೊಂಬೆ, ಟಗರಿನ ಬಂಡಿ ಸೇರಿದಂತೆ ಒಟ್ಟು 13 ವಿವಿಧ ಕಲಾ ಪ್ರಕಾರಗಳ ಜಾನಪದ ತಂಡವು ಮೆರವಣಿಗೆಯಲ್ಲಿ ಸಾಗಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್,   ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಾದ ಡಾ. ಬಗಾದಿ ಗೌತಮ್, ಮೇಯರ್ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಉಪ ವಿಶೇಷಾಧಿಕಾರಿ ಡಾ.ಎಂ.ಕೃಷ್ಣರಾಜು, ರೈತ ದಸರಾ ಉಪ ಸಮಿತಿ ಅಧ್ಯಕ್ಷರಾದ ಮಹೇಶ್ ಕುಮಾರ್ ಸೇರಿದಂತೆ ಮತ್ತಿನ್ನಿತರರು ಉಪಸ್ಥಿತರಿದ್ದರು.