ಮನೆ ರಾಜಕೀಯ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆರು ಕಮಾಂಡರ್ ಸೆಂಟರ್’ಗಳ ಜೋಡಣೆ: ಸಿಎಂ ಬೊಮ್ಮಾಯಿ

ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆರು ಕಮಾಂಡರ್ ಸೆಂಟರ್’ಗಳ ಜೋಡಣೆ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಟೆಲಿಮೆಡಿಸಿನ್ ಮೂಲಕ ಪ್ರಾದೇಶಿಕ ಹಂತದಲ್ಲಿ, ವೈದ್ಯರ ತಂಡವೊಂದು 24*7 ಗಳಿಗೆ ಆರೋಗ್ಯ ಕೇಂದ್ರಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಆರು ಕಮಾಂಡರ್ ಸೆಂಟರ್ ಗಳನ್ನು ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಜೋಡಿಸುವ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೆ.ಸಿ.* ಜನರಲ್ ಆಸ್ಪತ್ರೆಯಲ್ಲಿ ಆಯೋಜಿಸಿರುವ “ 50 ಹಾಸಿಗೆ ಸಾಮಥ್ರ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉಪಕೇಂದ್ರ”ದ ಹಾಗೂ “ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಕ್ಕಳ ತೀವ್ರ ನಿಗಾ ಘಟಕದ ಉಪಕೇಂದ್ರ”ದ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು .

100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವುದು  ತಲಾ 7-8 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳನ್ನು, ಬೆಡ್ ಗಳನ್ನು ಹೆಚ್ಚಿಸಲಾಗುವುದು. ಮೇಲ್ದರ್ಜೆಗೇರಿಸಿದ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಮೊದಲೇ ಇದ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಟೆಲಿಮೆಡಿಸಿನ್ ಗೆ ಜೋಡಣೆ ಮಾಡುವ  ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.

ಆಯುಷ್ಮಾನ್ ಕಾರ್ಡ್ ಬಳಸಲು ಸರಳೀಕೃತ ನಿಯಮಗಳಿಗೆ ಶೀಘ್ರದಲ್ಲಿ ಆದೇಶ:

ಇದಲ್ಲದೇ ಸುಮಾರು 81 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಗ್ರಾಮೀಣ ಹಾಗೂ ತಾಲ್ಲೂಕು ಮಟ್ಟದಲ್ಲಿ  ಹಾಗೂ ಬೆಂಗಳೂರಿನಲ್ಲಿ ವಲಯಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ, ಅವಶ್ಯಕತೆಯಿದ್ದಲ್ಲಿ ಶಸ್ತ್ರಚಿಕಿತ್ಸೆ, ಬಡವರಿಗೆ ಉಚಿತ ಕನ್ನಡಕ ನೀಡುವ ಕಾರ್ಯಕ್ರಮ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಕಿವುಡರಿಗೆ ಕಾಕ್ಲಿಯರ್ ಇಂಪ್ಲಾಂಟ್ ವ್ಯವಸ್ಥೆಯನ್ನು ಬಡವರಿಗೆ ಉಚಿತವಾಗಿ ಪೂರೈಸಲಾಗುತ್ತಿದ್ದು, ಇದಕ್ಕಾಗಿ 500 ಕೋಟಿ ರೂ. ಮೀಸಲಿರಿಸಲಾಗಿದೆ. ಡಯಾಲಿಸಿಸ್ ಸೈಕಲ್ ಗಳನ್ನು 30 ಸಾವಿರಗಳಿಂದ 60 ಸಾವಿರಗಳನ್ನು ಹೆಚ್ಚಿಸಲಾಗಿದೆ. ಕಿಮೋಥೆರಪಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆಯುಷ್ಮಾನ್ ಕಾರ್ಡ್ ಬಳಸಲು ಸರಳ ನಿಯಮಾವಳಿಗಳನ್ನು ಅತಿ ಶೀಘ್ರದಲ್ಲಿ ಹೊರಡಿಸಲಾಗುವುದು ಎಂದರು.

ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ:

ರೈತರಿಗೆ ಆರೋಗ್ಯ ಸೌಲಭ್ಯ ನೀಡುವ ‘ಯಶಸ್ವಿನಿ’ ಯೋಜನೆಯನ್ನು ನವೆಂಬರ್ 1 ರಂದು ಚಾಲನೆಗೊಳಿಸಲಾಗುವುದು. ಹೀಗೆ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಪೌಷ್ಟಿಕ ಆಹಾರ ಪೂರೈಸುವ ಜೊತೆಗೆ 4000 ಅಂಗನವಾಡಿಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ  ಬಹಳ ಮುಖ್ಯ. ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. 430 ನಮ್ಮ ಕ್ಲೀನಿಕ್ಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಇದರಲ್ಲಿ 240 ಕ್ಲಿನಿಕ್ಗಳು ಬೆಂಗಳೂರು ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿ ಇರಲಿದೆ. 4 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದರು.

ಜಯದೇವ, ಕೆಸಿಜನರಲ್ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದಿಂದ ಸ್ಥಾಪಿಸಲಾಗಿರುವ ಈ ಆಸ್ಪತ್ರೆಯ ಮಾದರಿ ಉತ್ತಮವಾಗಿದ್ದು, ಈ ಮಾದರಿಯನ್ನು ರಾಜ್ಯದ ಇತರೆ ಪ್ರದೇಶಗಳಲ್ಲಿಯೂ ಅನುಸರಿಸಬಹುದು. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಸರ್ಕಾರ ಒದಗಿಸಲಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಜಯದೇವ, ಕಿದ್ವಾಯಿ, ನಿಮಾನ್ಸ್ ಸೇರಿದಂತೆ ಪ್ರಮುಖ ಆರೋಗ್ಯ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿವೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಎಂಸಿಹೆಚ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಗಳ ಸ್ಥಾಪಿಸುವ ಯೋಜನೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಆರೋಗ್ಯಕರ ಸಮಾಜವಿದ್ದರೆ ಅಭಿವೃದ್ಧಿ ಸಾಧ್ಯ :

ಸರ್ವರಿಗೂ ಆರೋಗ್ಯ ಕೊಡುವುದು ಸರ್ಕಾರ, ಖಾಸಗಿ ವಲಯದ ಕರ್ತವ್ಯವಾಗಿದೆ. ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆ ಜನರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಖ್ಯಾತಿಯನ್ನು ಹೊಂದಿದೆ. ಇದಕ್ಕೆ ಕಾರಣರಾಗಿರುವ ವೈದರು, ಅರೆ ವೈದ್ಯಕೀಯ ಹಾಗೂ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆಗಳು. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಕರ್ತವ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯೂ ಇರುತ್ತದೆ. ಸರ್ಕಾರ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಒತ್ತು ನೀಡುತ್ತಿದ್ದು, ಮಾನವನ ಬೆಳವಣಿಗೆಗೆ ಪೂರಕವಾಗಿವೆ. ಆರೋಗ್ಯಕರ ಸಮಾಜವಿದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಶಾಸಕ ದಿನೇಶ್ ಗುಂಡೂರಾವ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್. ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಪೋಕ್ಸೊ ಕೇಸ್ ನಲ್ಲಿ ಜಾಮೀನು ನೀಡಲು ಅನುಸರಿಸಬೇಕಾದ ನಿಯಮಗಳು ಯಾವುವು?: ಇಲ್ಲಿದೆ ಮಾಹಿತಿ
ಮುಂದಿನ ಲೇಖನಅಯಿ ಗಿರಿನಂದಿನಿ ನಂದಿತಮೇದಿನಿ