ಮನೆ ರಾಜ್ಯ ಅಮೃತಕಾಲದ ಸರ್ವಸ್ಪರ್ಶಿ ಬಜೆಟ್‌ : ಸಚಿವ ಡಾ.ಕೆ.ಸುಧಾಕರ್‌

ಅಮೃತಕಾಲದ ಸರ್ವಸ್ಪರ್ಶಿ ಬಜೆಟ್‌ : ಸಚಿವ ಡಾ.ಕೆ.ಸುಧಾಕರ್‌

0

ಬೆಂಗಳೂರು(Bengaluru): ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಮ ವರ್ಗದ ಜನರ ಅವಶ್ಯಕತೆಗೆ ಪೂರಕವಾದ ಹಾಗೂ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾದ ಸರ್ವಸ್ಪರ್ಶಿ ಬಜೆಟ್‌ ನೀಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ 2023 ನೇ ಸಾಲಿನ ಬಜೆಟ್‌ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಾಬ್‌’ಕಾ ಸಾಥ್‌ ಸಬ್‌’ಕಾ ವಿಕಾಸ್‌ ಎಂಬ ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯ ಗುರಿಯೊಂದಿಗೆ ಕೇಂದ್ರ ಸರ್ಕಾರ ಉತ್ತಮ ಬಜೆಟ್‌ ನೀಡಿದೆ. 2019 ನೇ ಆರ್ಥಿಕ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ಬಜೆಟ್‌’ನಲ್ಲಿ ಶೇ.1.4 ರಷ್ಟು ಅನುದಾನ ಮೀಸಲಿಟ್ಟಿದ್ದು, 2023 ನೇ ಸಾಲಿನಲ್ಲಿ ಶೇ.2.1 ರಷ್ಟು ಮೀಸಲಿಡಲಾಗಿದೆ. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2104 ರಿಂದ ದೇಶದಲ್ಲಿ ವಿವಿಧೆಡೆ 157 ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸಿದ್ದು, ಈ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್‌ ಕಾಲೇಜುಗಳನ್ನು ಆರಂಭಿಸುವುದಾಗಿ ತಿಳಿಸಲಾಗಿದೆ. ಸಿಕಲ್‌ ಸೆಲ್‌ ಅನೀಮಿಯಾದ ನಿವಾರಣೆಗಾಗಿ ಪ್ರತ್ಯೇಕವಾದ ಅಭಿಯಾನ ಆರಂಭಿಸಲಾಗುತ್ತದೆ. ಫಾರ್ಮಾ ಉದ್ಯಮದಲ್ಲಿ ಸಂಶೋಧನೆಗೆ ಪ್ರೋತ್ಸಾಹಿಸಲು ಕಾರ್ಯಕ್ರಮ, ನಿಗದಿತ ಐಸಿಎಂಆರ್‌ ಲ್ಯಾಬ್‌ಗಳಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಸಂಶೋಧನೆಗೆ ಕಾರ್ಯಕ್ರಮ ರೂಪಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳು ಎಂದು ಸಚಿವರು ಶ್ಲಾಘಿಸಿದ್ದಾರೆ.

ಮಧ್ಯಮ ವರ್ಗಕ್ಕೆ ಕೊಡುಗೆ

ಮಧ್ಯಮ ವರ್ಗದ ಜನರ ನಿರೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅರಿತಿದ್ದು, ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ. ನಿಂದ 7 ಲಕ್ಷ ರೂ.ಗೆ ಹೆಚ್ಚಿಸಿದ್ದಾರೆ. ಕೋವಿಡ್‌ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಜನರಿಗೆ ಇದು ಚೇತೋಹಾರಿ ಕ್ರಮವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಚಿಕ್ಕಮಗಳೂರು, ತುಮಕೂರು ಸೇರಿದಂತೆ ಮಧ್ಯ ಕರ್ನಾಟಕ ಭಾಗಕ್ಕೆ ಉತ್ತಮ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಿಂದಾಗಿ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವೇಗ ದೊರೆತಿದೆ ಎಂದು ಸಚಿವರು ಹೇಳಿದ್ದಾರೆ.

ಹಿಂದಿನ ಲೇಖನಕನ್ನಡಿಗರಾದ ನ್ಯಾ. ಅರವಿಂದ್ ಕುಮಾರ್ ಸೇರಿ ಇಬ್ಬರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು
ಮುಂದಿನ ಲೇಖನಕೇಂದ್ರ ಬಜೆಟ್ 2023: 50ಕ್ಕೂ ಹೆಚ್ಚು ವಿಮಾನ ನಿಲ್ದಾಣ, ಏರೋಡ್ರೋಮ್‌, ಹೆಲಿಪೋರ್ಟ್‌ ಸ್ಥಾಪನೆ