ಹೊಸದಿಲ್ಲಿ: “ಚುನಾವಣೆಗೂ ಮುನ್ನ ಎಷ್ಟು ಜನರನ್ನು ಜೈಲಿಗೆ ಹಾಕಲಾಗುತ್ತದೆ? ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುವವರನ್ನೆಲ್ಲಾ ಜೈಲಿಗೆ ಹಾಕಲು ಸಾಧ್ಯವಿಲ್ಲ’ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ಎಂ.ಕೆ.ಸ್ಟಾಲಿನ್ ವಿರುದ್ಧ ಅವಹೇಳನಾ ಕಾರಿ ಹೇಳಿಕೆ ನೀಡಿದ್ದ ಯೂಟ್ಯೂಬರ್ ಎ. ದುರೈಮುರುಗನ್ ಸತ್ತಾಯ್‌ಗೆ ಜಾಮೀನು ನೀಡುವ ವೇಳೆ ಸುಪ್ರೀಂಕೋರ್ಟ್ ಈ ವಿಷಯ ಸ್ಪಷ್ಟಪಡಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ|ಅಭಯ್.ಎಸ್.ಓಕಾ ಅವರಿದ್ದ ಪೀಠ, ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುವವರನ್ನೆಲ್ಲಾ ನಾವು ಜೈಲಿಗೆ ಹಾಕಲು ಸಾಧ್ಯವೇ? ಯೋಚಿಸಿ ನೋಡಿ. ಹೀಗಾದರೆ ಚುನಾವಣೆಗೂ ಮುನ್ನ ಎಷ್ಟು ಜನ ಜೈಲು ಪಾಲಾಗುತ್ತಾರೆ? ಎಂದು ಪ್ರಶ್ನಿಸಿದೆ. ಬಂಧನಕ್ಕೊಳಪಟ್ಟಿರುವ ಯೂಟ್ಯೂಬರ್ ಯಾವುದೇ ಹಕ್ಕುಗಳನ್ನು ಉಲ್ಲಂಘನೆ ಮಾಡಿಲ್ಲ ಎಂದೂ ಹೇಳಿದೆ.
ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಯೂಟ್ಯೂಬರ್ ಜಾಮೀನಿಗೆ ಷರತ್ತು ವಿಧಿಸಬೇಕು ಎಂಬ ಕೋರಿಕೆಗೆ ಒಪ್ಪದ ನ್ಯಾಯಪೀಠ, “ಹೇಳಿಕೆ ಆಕ್ಷೇಪಾರ್ಹವೇ, ಅಲ್ಲವೇ ಎಂಬುದನ್ನು ನಿರ್ಧರಿಸುವವರು ಯಾರು’ ಎಂದು ಪ್ರಶ್ನಿಸಿತು.