ನವದೆಹಲಿ(Newdelhi): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನವರಿ 01, 2023ರ ವರೆಗೆ ಎಲ್ಲಾ ಮಾದರಿಯ ಪಟಾಕಿಗಳ ಉತ್ಪಾದನೆ, ದಾಸ್ತಾನು, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಕುರಿತು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿರುವ ಅವರು, ಆನ್‌ಲೈನ್ ಮುಖಾಂತರ ಪಟಾಕಿ ಮಾರಾಟಕ್ಕೂ ಅವಕಾಶವಿಲ್ಲ. ಎಲ್ಲಾ ಮಾದರಿಯ ಪಟಾಕಿಗಳ ಉತ್ಪಾದನೆ, ದಾಸ್ತಾನು, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದರಿಂದ ಜನರ ಜೀವವನ್ನು ಉಳಿಸಬಹುದು ಎಂದು ಹೇಳಿದ್ದಾರೆ.
ದೆಹಲಿ ಪೊಲೀಸ್, ದೆಹಲಿ ಮಾಲಿನ್ಯ ತಡೆ ಸಮೀತಿ ಮತ್ತು ಕಂದಾಯ ಇಲಾಖೆಗಳ ಸಹಯೋಗದಲ್ಲಿ ಕಡ್ಡಾಯ ನಿಷೇಧದ ನಿರ್ಧಾರ ಕೈಗೊಳ್ಳಲಾಗಿದೆ.
ಪಟಾಕಿ ಹಚ್ಚಬೇಡಿ ಎಂಬ ಅಭಿಯಾನವನ್ನು ಅಲ್ಲಿನ ಸರ್ಕಾರ ಕೈಗೊಂಡಿದೆ.ನಿಯಮಗಳನ್ನು ಮೀರಿದರೆ ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.