ದಾವಣಗೆರೆ : ಧರ್ಮ ಅಂತಾ ಬಂದರೆ ಸಕಲ ವೀರಶೈವ ಲಿಂಗಾಯತರು ಹಿಂದುಗಳು. ಇದೇ 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ನಮಗೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ. ಎಲ್ಲ ವೀರಶೈವ ಲಿಂಗಾಯತರು ಆ ದಿನ ಎಲ್ಲರೂ ಅಂದೇ ರಾಮ ನವಮಿ ಎಂದು ತಿಳಿದು ಪೂಜೆ ಮಾಡುವಂತೆ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಎಂದು ಕರೆ ನೀಡಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಮಠದ ಹರ ಜಾತ್ರೆಯಲ್ಲಿ ಮಾತನಾಡಿದ ಅವರು, ಎಲ್ಲಾ ವೀರಶೈವ ಲಿಂಗಾಯತರಿಗೆ ಒಂದೇ ಮೀಸಲಾತಿ ಇರಬೇಕು ಎಂದು ಹೇಳಿದ್ದಾರೆ.
ಕೆಲವರು 2ಎ, 3ಎ, 3ಬಿ ಮತ್ತು ಎಸ್ ಸಿ ಮೀಸಲಾತಿ ಪಡೆಯುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಹಾಗೂ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ನಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ. ನಾವು ಸಮುದಾಯವನ್ನು ಒಡೆಯುವುದಿಲ್ಲ ಎಂದಿದ್ದಾರೆ.
2ಎ ಮೀಸಲಾತಿಗಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಲಿಂಗಾಯತರನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿ ಪ್ರಕಟಿಸಿದ್ದನ್ನು ವಿರೋಧಿಸಿಲ್ಲ. ಅದೇ ರೀತಿ ಸ್ವಾಗತ ಕೂಡ ಮಾಡಿಲ್ಲ. ಇದಕ್ಕೆ ಬೇಕಾದ ಕಾನೂನು ಹೋರಾಟ ಮಾಡುತ್ತಿದ್ದೇವೆ. ಈ ವಿಚಾರ ಹೆಚ್ಚು ಮಾಧ್ಯಮದಲ್ಲಿ ಬಂದರೆ ಮೀಸಲಾತಿ ಸಿಗಲ್ಲ ಎಂದು ಹೇಳಿದ್ದಾರೆ.