ಬೆಂಗಳೂರು(Bengaluru): ದೀಪಾವಳಿ ಗಿಫ್ಟ್ ಹೆಸರಲ್ಲಿ ಪತ್ರಕರ್ತರಿಗೆ ಹಣ ನೀಡಿದ ಪ್ರಕರಣದ ಬಗ್ಗೆ ನಾವು ಮೂಗು ತೂರಿಸೋ ಕೆಲಸ ಮಾಡುವುದಿಲ್. ನನ್ನ ಹತ್ತಿರ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಿದರೆ ಲೋಕಾಯುಕ್ತ ತನಿಖೆ ಮಾಡಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರು ಏನು ಆರೋಪ ಮಾಡಿದ್ದಾರೋ ಅವರಿಗೆ ಕೇಳಬೇಕು ಎಂದು ತಿಳಿಸಿದರು.
ಕೆ.ಆರ್ ಪುರಂ ಇನ್ಸ್ಪೆಕ್ಟರ್ ನಂದೀಶ್ 70, 80 ಲಕ್ಷ ಕೊಟ್ಟು ಬಂದಿದ್ದರು ಎಂಬ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಂಟಿಬಿ ನಾಗರಾಜ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಳಿ ನಾನು ಮಾಹಿತಿ ಪಡೆಯುತ್ತೇನೆ. ಸದ್ಯ ಅವರು ಕಲಬುರಗಿ ಜಿಲ್ಲೆಯಲ್ಲಿದ್ದಾರೆ. ಈ ಬಗ್ಗೆ ಅವರೇ ಇವತ್ತು ಸ್ಪಷ್ಟೀಕರಣ ಕೊಡಲಿದ್ದಾರೆ ಎಂದರು.
ನಗರದಲ್ಲಿ ತಡ ರಾತ್ರಿಯವರೆಗೂ ಕ್ಲಬ್, ಪಬ್ ಓಪನ್ ಮಾಡುತ್ತಿದ್ದಾರೆ. ಮೊದಲಿಂದಲೂ ಇದರ ವಿರುದ್ಧ ಕ್ರಮಕ್ಕೆ ನಾನು ಬದ್ಧನಾಗಿದ್ದೇನೆ. ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಅಲ್ಲಿ ಅವತ್ತು ರೇವ್ ಪಾರ್ಟಿ ನಡೆಯುತ್ತಿತ್ತು. ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಹೀಗಾಗಿ ಕೆ.ಆರ್ ಪುರಂ ಇನ್ಸ್ಪೆಕ್ಟರ್ ನಂದೀಶ್ ಅವರನ್ನ ಕಮಿಷನರ್ ಸಸ್ಪೆಂಡ್ ಮಾಡಿದ್ದರು. ಆದ್ರೆ ಅವರಿಗೆ ಹೃದಯಾಘಾತ ಆಗಿದೆ. ಇದೊಂದು ದುರದೃಷ್ಟಕರ ಘಟನೆ.ಇದಕ್ಕೆ ಬೇರೆ ಯಾವುದೋ ಅರ್ಥ ಕಲ್ಪಿಸೋದು ಬೇಡ ಎಂದರು.
ಈಗ ಯಾವುದ್ಯಾವುದಕ್ಕೂ ಲಿಂಕ್ ಮಾಡಿ ಮಾತನಾಡುವುದು ಸರಿಯಲ್ಲ. ನಾನು ಆರಂಭದಿಂದಲೂ ಬೆಂಗಳೂರಿನಲ್ಲಿ ಕ್ಯಾಬರೆ ಇಸ್ಪೀಟ್ ಕ್ಲಬ್, ಕ್ಯಾಸಿನೊ ಇವೆಲ್ಲವೂ ಬಂದಾಗಬೇಕು ಎಂದು ಕೆಲಸ ಮಾಡಿದ್ದೇನೆ. ಆದರೆ ಇತ್ತೀಚಿಗೆ ಮತ್ತೆ ಓಪನ್ ಮಾಡುವ ಕೆಲಸ ಕೆಲ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಕಮಿಷನರ್ ಎಲ್ಲರಿಗೂ ಸುತ್ತೋಲೆ ಕಳಿಸಿದ್ದರು. ಎಲ್ಲವನ್ನು ಬಂದ್ ಮಾಡಬೇಕು ಎಂದು ಸೂಚಿಸಿದ್ದರು. ಆ ರೀತಿ ನಡೆಯುತ್ತಿದ್ದರೆ ಸ್ಥಳೀಯ ಅಧಿಕಾರಿಗಳು ಹೊಣೆಗಾರರನ್ನಾಗಿ ಮಾಡಲಾಗುವುದು ಅಂತ ಹೇಳಿದ್ದರು. ಸೂಚನೆ ಕೊಟ್ಟಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತು ಎಂದರು.
ಪಾರ್ಟಿಯಲ್ಲಿ ಸುಮಾರು 20 ಜನ ಸೂಡಾನ್ ಪ್ರಜೆಗಳಿದ್ದರು. ಸುಮಾರು 30ರಷ್ಟು ಹೆಣ್ಣು ಮಕ್ಕಳು ಕೂಡ ಇದ್ದರು. ಹೀಗಾಗಿ ಸಿಸಿಬಿ ರೈಡ್ ಮಾಡಿತ್ತು, ಅದರ ಹಿನ್ನೆಲೆಯಲ್ಲಿ ಕಮಿಷನರ್ ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಇದೇ ಮಾಹಿತಿಯನ್ನು ನನಗೂ ಕೂಡ ಕಳಿಸಿದ್ದರು. ಇದಕ್ಕೂ ಅವರ ಸಾವಿಗೂ ಯಾವುದೇ ರೀತಿಯ ಸಂಬಂಧ ಇದೆಯೋ ನನಗೆ ತಿಳಿದಿಲ್ಲ. ನಂದೀಶ್ ಅವರಿಗೆ ಚಿಕ್ಕ ಮಕ್ಕಳಿದ್ದಾರೆ, ಅವರ ಸಾವು ನನಗೂ ಬೇಸರ ತಂದಿದೆ. ಇಡೀ ಪ್ರಕರಣದ ವಿಚಾರಣೆ ಆಗಲಿದೆ. ಹಿರಿಯ ಅಧಿಕಾರಿಗಳಿಂದ ಸ್ಷಷ್ಟನೆ ನೀಡಲು ಕಮಿಷನರ್ಗೆ ಸೂಚಿಸುತ್ತೇನೆ ಎಂದು ತಿಳಿಸಿದರು.