ಮನೆ ಭಾಷೆ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

0

ಹಾವೇರಿ(Haveri): ನಗರದಲ್ಲಿ 2023ರ ಜನವರಿ 6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್‌ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಲಾಂಛನದಲ್ಲಿ ರಾಣೆಬೆನ್ನೂರಿನ ಕೃಷ್ಣಮೃಗ, ಯಾಲಕ್ಕಿ ಹಾರ, ಬ್ಯಾಡಗಿ ಮೆಣಸಿನಕಾಯಿ, ಬಂಕಾಪುರದ ನವಿಲುಧಾಮ, ಭುವನೇಶ್ವರಿ ದೇವಿ, ಮದಗ ಮಾಸೂರು ಕೆರೆ, ಗಳಗನಾಥೇಶ್ವರ ದೇವಾಲಯ, ಹಾವೇರಿಯ ಪುರಸಿದ್ಧೇಶ್ವರ ದೇವಾಲಯ, ಹಾನಗಲ್‌ ಕುಮಾರ ಶಿವಯೋಗಿ, ವಿ.ಕೃ. ಗೋಕಾಕ್‌, ಅಂಬಿಗರ ಚೌಡಯ್ಯ, ಸರ್ವಜ್ಞ, ಕನಕದಾಸರು, ಶಿಶುನಾಳ ಷರೀಫ, ಪಂಚಾಕ್ಷರಿ ಗವಾಯಿ, ಶರಣೆ ಹೆಳವನಕಟ್ಟೆ ಗಿರಿಯಮ್ಮ, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವಪ್ಪ, ಕಾದಂಬರಿ ಪಿತಾಮಹ ಗಳಗನಾಥ, ಜಾನಪದ ವಿವಿ ಧ್ಯೇಯ ವಾಕ್ಯ, ಕಸಾಪ ಕೇಂದ್ರ ಕಚೇರಿಯ ಚಿತ್ರಗಳು ಇವೆ.

3 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ

ಸಚಿವ ವಿ.ಸುನಿಲ್‌ಕುಮಾರ್‌ ಮಾತನಾಡಿ, ಸಿಎಂ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 3 ಲಕ್ಷ ಜನರು ಬರುವ ನಿರೀಕ್ಷೆಯಿದೆ. ನಗರದಲ್ಲಿ ಕನಿಷ್ಠ 25 ಸಾವಿರ ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ‘ಕನಕ–ಷರೀಫ–ಸರ್ವಜ್ಞ’ ಹೆಸರಿನ ಪ್ರಧಾನ ವೇದಿಕೆ ಹಾಗೂ ‘ಪಾಪು–ಚಂಪಾ’ ಮತ್ತು ‘ಹೊಸಮನಿ ಸಿದ್ದಪ್ಪ–ಮಹದೇವ ಬಣಕಾರ’ ಹೆಸರಿನ 2 ಉಪ ವೇದಿಕೆಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.

ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವು ಉತ್ತರ ಕರ್ನಾಟಕದ ದಸರಾ ಇದ್ದಂತೆ. ಮೈಸೂರು ದಸರಾಕ್ಕಿಂತ ಚೆನ್ನಾಗಿ, ನಗರದ 20 ಕಿ.ಮೀ. ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಬೇಕು. ಆಹಾರ ಸಮಿತಿ ಮತ್ತು ವಸತಿ ಸಮಿತಿಯ ಮೇಲೆ ಸಮ್ಮೇಳನದ ಬಹುಪಾಲು ಯಶಸ್ಸು ನಿಂತಿದೆ. ಸಮ್ಮೇಳನಕ್ಕೆ 2 ತಿಂಗಳು ಬಾಕಿ ಇದ್ದು, ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಶ್ರಮಿಸಿ, ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

86 ಸಾಧಕರಿಗೆ ಸನ್ಮಾನ, 86 ಪುಸ್ತಕಗಳ ಬಿಡುಗಡೆ

ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನವರಿ 6ರಂದು ಉದ್ಘಾಟಿಸಲಿದ್ದಾರೆ. 86ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ 86 ಸಾಧಕರಿಗೆ ಸನ್ಮಾನ ಹಾಗೂ 86 ಪುಸ್ತಕಗಳ ಬಿಡುಗಡೆಯಾಗಲಿದೆ. 24 ಗೋಷ್ಠಿಗಳನ್ನು ನಡೆಸುವ ಚಿಂತನೆಯಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ದೀಪ ತೆಗೆದುಕೊಂಡು ಕನ್ನಡ ರಥ ಹೊರಡಲಿದೆ. ಅದೇ ದೀಪದಿಂದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಲಿರುವುದು ಈ ಬಾರಿಯ ವಿಶೇಷ ಎಂದರು.

ಹಿಂದಿನ ಲೇಖನಪರ್ತ್‌ನಲ್ಲಿ ಭಾನುವಾರ ನೆದರ್ಲೆಂಡ್ಸ್‌ ವಿರುದ್ಧ ಪಾಕಿಸ್ತಾನ ಪೈಪೋಟಿ
ಮುಂದಿನ ಲೇಖನಆಯ್ದ ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಆರೋಪ: ದೂರು ನೀಡಿದರೆ ಲೋಕಾಯುಕ್ತ ತನಿಖೆ ಮಾಡಲಿದೆ – ಆರಗ ಜ್ಞಾನೇಂದ್ರ