ಮೈಸೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆಯಲ್ಲಿ ಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ನಗರ ತಾಲೂಕಿನ ಇಬ್ಬರು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೆ.ಆರ್. ನಗರ ತಾಲೂಕಿನ ಭೇರ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಕಾತ್ಯಾಯಿನಿ ಹಾಗೂ ಹಂಪಾಪುರ ಶಾಲೆಯ ಮುಖ್ಯ ಶಿಕ್ಷಕ ಅರವಿಂದ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಏಪ್ರಿಲ್ 2ರಂದು ಪರೀಕ್ಷೆ ಸಂದರ್ಭ ಈ ಕೇಂದ್ರಗಳಿಗೆ ಉಪನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಕೇಂದ್ರಗಳಲ್ಲಿ ನಿಯಮಾನುಸಾರ ಪರೀಕ್ಷೆ ವೇಳೆ ಪರೀಕ್ಷಾ ಕೊಠಡಿಗಳ ವೆಬ್ ಕಾಸ್ಟಿಂಗ್ ಮಾಡಿಲ್ಲ. ಕೆಲವು ಅವಧಿವರೆಗೆ ಉದ್ದೇಶಪೂರ್ವಕವಾಗಿ ಕ್ಯಾಮೆರಾಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಪರೀಕ್ಷಾ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬಂದಿತ್ತು.
ಪರೀಕ್ಷಾ ಕೇಂದ್ರದ ನಿರ್ವಹಣೆಯಲ್ಲಿ ಲೋಪ ತೋರಿದ ಆರೋಪದ ಮೇಲೆ ಡಿಡಿಪಿಐ ನೀಡಿರುವ ವರದಿ ಆಧರಿಸಿ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ. ಕಾವೇರಿ ಅಮಾನತು ಆದೇಶ ಹೊರಡಿಸಿದ್ದಾರೆ.