ಬೆಂಗಳೂರು: ಮಾನ್ಯತೆ ಪಡೆದುಕೊಳ್ಳಲು ಮತ್ತು ಮಾನ್ಯತೆ ನವೀಕರಣ ಮಾಡಿಕೊಳ್ಳಲು ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಸೇರಿದಂತೆ ಹಲವು ಷರತ್ತುಗಳ ಪಾಲನೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೆ ಕಾಲಾವಕಾಶ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಶಾಲೆಗಳಿಗೆ ಮಾನ್ಯತೆ ಪಡೆದುಕೊಳ್ಳಲು ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು 2022ರ ಜೂನ್ 6 ರಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ಈ ಸುತ್ತೋಲೆ ಪ್ರಶ್ನಿಸಿ ಅನುದಾನ ರಹಿತ ಖಾಸಗಿ ಶಾಲೆ ಸಂಘ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸಿರುವುದು ಸರ್ಕಾರಿ ಶಾಲೆಗಳಿಗೂ ಅನ್ವಯವಾಗಬೇಕು. ಸುತ್ತೋಲೆ ಪಾಲಿಸಿ ಸರ್ಕಾರ ಮಾದರಿ ನಾಗರಿಕನಾಗಿ ನಡೆದುಕೊಳ್ಳಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿತು.
ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯ ಕ್ರಮಗಳನ್ನು ಖಾಸಗಿ ಶಾಲೆಗಳಲ್ಲಿ ಬಯಸುವ ಸರ್ಕಾರ, ಅದನ್ನು ತನ್ನ ಅಧೀನದಲ್ಲಿರುವ ಸರ್ಕಾರಿ ಶಾಲೆಗಳಲ್ಲೂ ಬಯಸಬೇಕು. ಈ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗೆ ವಿನಾಯತಿ ಸಲ್ಲದು ಎಂದು ಹೇಳಿದೆ.