ಮನೆ ಮಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಚೆಲುವಾಂಬ ಆಸ್ಪತ್ರೆಗೆ ಆ್ಯಂಬುಲೆನ್ಸ್ ಹಸ್ತಾಂತರ

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಚೆಲುವಾಂಬ ಆಸ್ಪತ್ರೆಗೆ ಆ್ಯಂಬುಲೆನ್ಸ್ ಹಸ್ತಾಂತರ

0

ಮೈಸೂರು(Mysuru): ಗಣಪತಿ ಸಚ್ಚಿದಾನಂದ ಶ್ರೀಗಳ 80ನೇ ವರ್ಧಂತ್ಯುತ್ಸವದ ಅಂಗವಾಗಿ  ಅವಧೂತ ದತ್ತ ಪೀಠದಿಂದ ಮೈಸೂರಿನ ಚೆಲುವಾಂಬಾ ಆಸ್ಪತ್ರೆಗೆ ಗಣಪತಿ ಸಚ್ಚಿದಾನಂದ  ಆಶ್ರಮದ ವಿಶ್ವಪ್ರಾರ್ಥನಾ ಮಂದಿರದ ಎದುರು ಆ್ಯಂಬುಲೆನ್ಸ್ ಹಸ್ತಾಂತರಿಸಲಾಯಿತು.

ಆ್ಯಂಬುಲೆನ್ಸ್ 28ಲಕ್ಷ ರೂ.ಮೌಲ್ಯದ್ದಾಗಿದ್ದು, ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ   ಮೂಲಕ ಆಸ್ಪತ್ರೆಯ ಸೂಪರಿಡೆಂಟ್ ಡಾ.ಸವಿತಾ ಹಾಗೂ ಎಂ ಎಂ ಸಿ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಅವರಿಗೆ ಹಸ್ತಾಂತರಿಸಿದರು.

ಗಣಪತಿ ಸಚ್ಚಿದಾನಂದ ಶ್ರೀಗಳ 80ನೇ ಜನ್ಮದಿನೋತ್ಸವದ ಅಂಗವಾಗಿ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಶ್ರೀಗಳ ಜನ್ಮ ಸ್ಥಳವಾದ ಮೇಕೆದಾಟಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಸ್ವಾಸ್ಥ್ಯಕ್ಕಾಗಿ ಆಂಬ್ಯುಲೆನ್ಸ್ ಸಹಾಯ ಮಾಡುವ ಉದ್ದೇಶ ಹೊಂದಿದ್ದರು. ಅದರಂತೆಯೇ ಆಂಬ್ಯುಲೆನ್ಸ್ ಕೊಡುಗೆ ನೀಡಲಾಯಿತು.

ಈ ಸಂದರ್ಭ ದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ದೇವರ ಮುಂದೆ ನಮಗೆ ಏನು ಬೇಕೆಂಬ ಮನೋಕಾಮನೆಗಳನ್ನು ಇಟ್ಟರೆ ಈಡೇರುವುದಿಲ್ಲ.ದೇವರು ಹಾಗೂ ಗುರುಗಳನ್ನು ಒಲಿಸಿಕೊಳ್ಳಲು ಶ್ರದ್ಧೆ, ಭಕ್ತಿಯೊಂದೇ ದಾರಿ ಎಂದು ತಿಳಿಸಿದರು.

ಲೋಕಕಲ್ಯಾಣಕ್ಕಾಗಿ ಒಂದು ಕೋಟಿ ದತ್ತಾತ್ರೇಯನ ಜಪ ನಡೆಯುತ್ತಿದೆ. ಇದು ಲೋಕಕಲ್ಯಾಣಕ್ಕಾಗಿ ಮಾತ್ರವಲ್ಲ ಕರ್ನಾಟಕದ ಅಭಿವದ್ಧಿಗೆ ಪೂರಕ ಎಂದರು.

ನಾನು ಜನಿಸಿದ್ದು ಹುಬ್ಬಳ್ಳಿಯ ದತ್ತಾತ್ರೇಯ ಓಣಿಯಲ್ಲಿ. ನಾನು ಶಾಲೆಗೆ ಹೋಗುವಾಗಲೆಲ್ಲಾ ಅಲ್ಲಿನ ಮಾರುಕಟ್ಟೆ ಬಳಿ‌ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ‌ಮಾಡುತ್ತಿದ್ದೆ ಎಂದು ಸ್ಮರಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ‌ಆಶೀರ್ವಾದ‌‌ ನಾಡಿನ ಪ್ರತಿಯೊಬ್ಬರಿಗೂ ಅದರಲ್ಲೂ ವಿಶೇಷವಾಗಿ ಅಂಗವಿಕಲರು ಹಾಗೂ ಬಡಜನರಿಗೆ ಸಿಗಲಿ ಎಂದು ಆಶಿಸಿದರು.ಶ್ರೀಗಳು ಹುಬ್ಬಳ್ಳಿಗೆ ಬಂದು ದತ್ತಾತ್ರೇಯ ಸ್ವಾಮಿ ದರ್ಶನ ಪಡೆಯುವಂತೆ ಬೊಮ್ಮಾಯಿ ಮನವಿ ಮಾಡಿದರು.

ಶ್ರೀಗಳು ಮೇ 22ರಂದು ನನಗೆ ಇಲ್ಲಿಗೆ‌ ಬರಲು ಆಹ್ವಾನ ನೀಡಿದ್ದರು. ಆದರೆ, ದಾವೂಸ್‌ನ ವಿಶ್ವ ಆರ್ಥಿಕ ಸಮ್ಮೇಳನದ ಕಾರಣದಿಂದ ಇಲ್ಲಿಗೆ ಬರಲು ಆಗಲಿಲ್ಲ. ಇಂದು ದತ್ತನ ಶಕ್ತಿಯೇ ನನ್ನನ್ನು ಇಲ್ಲಿಗೆ‌ ಕರೆಸಿಕೊಂಡಿದೆ ಎಂದು ನುಡಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಜೀವನದಲ್ಲಿ ನಡೆಯುವುದೆಲ್ಲವೂ ಒಳ್ಳೆಯದಕ್ಕಾಗಿಯೇ ಎಂದು ಭಾವಿಸಬೇಕು. ಏನೇ ಎದುರಾದರೂ ಅದಕ್ಕೆ ಯಾರು ಕಾರಣ? ಏನು ಕಾರಣ? ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜನರು ಸತ್ವಗುಣ ಇಚ್ಚಿಸುವುದಿಲ್ಲ. ಹೀಗಾಗಿ ಸುಳ್ಳು ಹೇಳುತ್ತಾರೆ. ಸತ್ಯವೇ ಜೀವನ, ಸತ್ಯವೇ ಪ್ರಾಣ ಎಂಬುದನ್ನು ಮನುಷ್ಯ ಅರಿಯಬೇಕು. ಇದಕ್ಕೆ ಗುರುವಿನ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಶ್ರೀದತ್ತನ ರೂಪ ಮೂರು ತತ್ವಗಳನ್ನು ಹೇಳುತ್ತದೆ. ಗುರು ಅವತಾರವೇ ಶ್ರೇಷ್ಠ. ಅದೇ ದತ್ತಾತ್ರೇಯ ‌ಅವತಾರ ಎಂದು ಬಣ್ಣಿಸಿದರು.ನಮ್ಮ ಆಶ್ರಮಕ್ಕೆ ಹಲವಾರು ಮುಖ್ಯಮಂತ್ರಿಗಳು, ರಾಷ್ಟ್ರಪತಿಗಳು, ಪ್ರಧಾನಿಗಳು ಬಂದಿದ್ದಾರೆ. ಬಹಳಷ್ಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ, ಹಾಲಿ ಮುಖ್ಯಮಂತ್ರಿ ವಿಭಿನ್ನವಾಗಿ ಕಾಣುತ್ತಾರೆ. ಅದೇ ಅವರ‌ ವಿಶೇಷತೆ. ಇದು ನಾಡಿನ ಸೌಭಾಗ್ಯ ಎಂದು ತಿಳಿಸಿದರು.

ನಾನು ಮೈಸೂರಿನ ಈ ಪೀಠದಲ್ಲೇ ಇರಬೇಕೆಂದು ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ನಿರ್ಧಾರ ‌ಮಾಡುತ್ತೇನೆ ಎಂದು ಹೇಳಿದರು.

ಬೊಮ್ಮಾಯಿ ಅವರು ಮುಂದೆಯೂ ಹೀಗೆಯೇ ರಥ ನಡೆಸಲಿ ಎಂದು ಆಶೀರ್ವದಿಸಿದರುಲೋಕಕಲ್ಯಾಣಕ್ಕಾಗಿ ಒಂದು ಕೋಟಿ ದತ್ತ ಯಜ್ಞ, ಲಕ್ಷ ಶ್ರೀಸೂಕ್ತ ಹೋಮ ಮಾಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಕಿರಿಯ ಸ್ವಾಮೀಜಿ ದತ್ತ ವಿಜಯಾನಂದತೀರ್ಥ ಮುಖ್ಯಮಂತ್ರಿಯನ್ನು ಆಶ್ರಮದ ‌ಪರವಾಗಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ದತ್ತ ವಿಜಯಾನಂದ  ಶ್ರೀಗಳು, ಸಂಸದ ಪ್ರತಾಪ್ ಸಿಂಹ , ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಲ್.ನಾಗೇಂದ್ರ,  ಎಸ್.ಎ.ರಾಮದಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಹಿಂದಿನ ಲೇಖನಬಿಜೆಪಿ ಸೋಲಿಸಲು, ಜೆಡಿಎಸ್ ಪಕ್ಷ ಕಾಂಗ್ರೆಸ್ ಬೆನ್ನಿಗೆ ನಿಲ್ಲಬೇಕಾದ ಅಗತ್ಯವಿದೆ: ಸಿದ್ದರಾಮಯ್ಯ
ಮುಂದಿನ ಲೇಖನಸಿದ್ದರಾಮಯ್ಯ ಚಡ್ಡಿ ಸುಡುವುದಕ್ಕೂ ಮುನ್ನ ವಿಕೃತ ಮನಸ್ಸು ಸುಡಲಿ: ವಿ.ಸುನೀಲ್ ಕುಮಾರ್