ಚಾಮರಾಜನಗರ: ಹನೂರು ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ಗೂಂಡಾ, ರೌಡಿ ಎಂದು ಹೇಳಿಕೆ ನೀಡಿದ ಸಂಬಂಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಸಹಾಯಕ ಚುನಾವಣಾಧಿಕಾರಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳಿಂದ ವರದಿ ಪಡೆದಿರುವ ಜಿಲ್ಲಾ ಚುನಾವಣಾಧಿಕಾರಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿರುವ ಹೇಳಿಕೆಗೆ ವಿವರಣೆ ನೀಡುವಂತೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಕಳೆದ 28 ರಂದು ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಓರ್ವ ಗೂಂಡಾ, ರೌಡಿ. ಅವರ ವಿರುದ್ಧ ಕೊಲೆ ಪ್ರಕರಣ ಆರೋಪ ಇದೆ. ಕೊಲೆ ಆರೋಪದಲ್ಲಿ ಗುಜರಾತ್ನಲ್ಲಿ ಗಡಿಪಾರು ಕೂಡ ಆಗಿದ್ದರು. ಬಿಜೆಪಿ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಇಂಥವರ ಕೈಯಲ್ಲಿ ಅಧಿಕಾರ ಸಿಕ್ಕರೆ ದೇಶದ ಸ್ಥಿತಿ ಏನಾಗುತ್ತದೆ ಎಂಬುದನ್ನು ಈ 10 ವರ್ಷಗಳಲ್ಲಿ ನೋಡಿದ್ದೇವೆ. ಇಂತವರನ್ನ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ದೂರಿದ್ದರು.
ಅಮಿತ್ ಶಾ ವಿರುದ್ಧ ಹೇಳಿಕೆ ನೀಡಿರುವ ಸಂಬಂಧ ಯತೀಂದ್ರ ವಿರುದ್ಧ ಬಿಜೆಪಿ ಬೆಂಗಳೂರಲ್ಲಿ ದೂರು ದಾಖಲು ಮಾಡಿತ್ತು. ಈ ಹಿನ್ನೆಲೆಯಲ್ಲಿ ಯತೀಂದ್ರಗೆ ಚಾಮರಾಜನಗರ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ.
ಚುನಾವಣಾಧಿಕಾರಿಯ ನೋಟಿಸ್ ಕುರಿತು ಯತೀದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನೋಟಿಸ್ ಬಂದಿದೆ. ಇದಕ್ಕೆ ಸರಿಯಾದ ರೀತಿಯಲ್ಲಿ ಉತ್ತರಿಸುತ್ತೇನೆ. ನಾನು ಅಮಿತ್ ಶಾ ಅವರ ವಿರುದ್ಧ ನೀಡಿರುವ ಹೇಳಿಕೆ ವೈಯಕ್ತಿಕವಾದುದಲ್ಲ. ಸಿಬಿಐನವರು ಹೇಳಿರುವುದನ್ನೇ ಪುನರುಚ್ಛರಿಸಿದ್ದೇನೆ. ಬಿಜೆಪಿಯವರು ನನ್ನ ಮೇಲೆ ಕೋಪ ಮಾಡಿಕೊಳ್ಳುವ ಮುನ್ನ ಸಿಬಿಐ ಮೇಲೆ ಕೋಪಿಸಿಕೊಳ್ಳಬೇಕು ಎಂದು ಬಿಜೆಪಿಗೆ ಯತೀಂದ್ರ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತ್ರಿಕ್ರಿಯಿಸಿದ್ದು, ಕೋರ್ಟ್ಗೆ ಸಿಬಿಐ ನೀಡಿರುವ ವರದಿ ಆಧರಿಸಿ ಯತೀಂದ್ರ ಹೇಳಿಕೆ ನೀಡಿದ್ದಾನೆಯೇ ಹೊರತು ಅಮಿತ್ ಶಾ ಅವರನ್ನು ಅವಮಾನ ಮಾಡಲು ಹೇಳಿಕೆ ನೀಡಿಲ್ಲ ಎಂದು ಪುತ್ರನ ಹೇಳಿಕೆಯನ್ನು ಮೈಸೂರಲ್ಲಿ ಸೊಮವಾರ ಸಮರ್ಥಿಸಿಕೊಂಡಿದ್ದರು.