ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಬಿಗಡಾಯುಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸುವಂತೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಉತ್ತರ ಭಾರತ ವಾಯು ಮಾಲಿನ್ಯದಿಂದ ತತ್ತರಿಸಿದ್ದು ದಟ್ಟ ಹೊಗೆಯಿಂದ ಆವೃತಗೊಂಡಿದ್ದು ಹೋಗಲಾಡಿಸಲು ಕೃತಕ ಮಳೆಯೊಂದೇ ಪರಿಹಾರ ಅಲ್ಲದೆ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ತುರ್ತು ಅಗತ್ಯ ಕ್ರಮ ಕೈಗೊಳ್ಳುವ ಅವಶ್ಯಕತೆ ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಇಂದು ದೇಶದಲ್ಲೇ ದೆಹಲಿ ನಗರ ಅತ್ಯಂತ ಕಲುಷಿತ ನಗರವಾಗಿ ಉಳಿದುಕೊಂಡಿದ್ದು, ದಟ್ಟವಾದ ಹೊಗೆ ಇಡೀ ನಗರವನ್ನೇ ಆವರಿಸಿಕೊಂಡಿದೆ ಇದರಿಂದ ಜನರಲ್ಲಿ ಉಸಿರಾಟ, ಕೆಮ್ಮು, ಚರ್ಮ ರೋಗ ಹೀಗೆ ಹಲವಾರು ಅರೋಗ್ಯ ಸಮಸ್ಯೆಗಳು ಎದುರಾಗಿದೆ ಎಂದು ಸಚಿವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡ ಗೋಪಾಲ್ ರೈ, “ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ಇಂದು ನಾನು ನಾಲ್ಕು ಪತ್ರಗಳನ್ನು ಕಳುಹಿಸಿದ್ದರೂ ಕೃತಕ ಮಳೆ ಕುರಿತು ಒಂದೇ ಒಂದು ಸಭೆಯನ್ನು ಕರೆದಿಲ್ಲ” ಎಂದು ಹೇಳಿದರು.