ನವದೆಹಲಿ : ಅನುಕಂಪದ ಹುದ್ದೆಗೆ ಪದೋನ್ನತಿ ನೀಡಲು ಅವಕಾಶವಿಲ್ಲ. ಮೃತರ ಹೆಸರಿನಲ್ಲಿ ಅವರ ಅವಲಂಬಿತರು ಹುದ್ದೆ ಪಡೆದ ಬಳಿಕ ಬೇಡಿಕೆ ಈಡೇರಿದಂತೆ. ಅವರು ಉನ್ನತ ಹುದ್ದೆಗೆ ಬಡ್ತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಹೀಗೆ ನೀಡುತ್ತಾ ಹೋದರೆ, ಅನುಕಂಪಕ್ಕೆ ಅಂತ್ಯವೇ ಇಲ್ಲದಂತಾಗುತ್ತದೆ. ಅನುಕಂಪದ ಮೇಲೆ ಪಡೆದ ಸೌಲಭ್ಯವನ್ನು ಉನ್ನತೀಕರಿಸಿಲು ಸಾಧ್ಯವಿಲ್ಲ ಎಂದು ಪೀಠವು ಕಟ್ಟುನಿಟ್ಟಾಗಿ ಹೇಳಿದೆ.
ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನ ಪ್ರಕಾರ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ಪಡೆದ ಉದ್ಯೋಗಿಗೆ, ತದನಂತರ ಪದೋನ್ನತಿ ಅಥವಾ ಉನ್ನತ ಹುದ್ದೆ ಕೇಳುವ ಹಕ್ಕಿಲ್ಲ. ಅನುಕಂಪದ ನೇಮಕಾತಿ ಕೇವಲ ಕುಟುಂಬದ ಆರ್ಥಿಕ ಸಂಕಷ್ಟ ನಿವಾರಣೆಗೆ ಒಂದು ವಿನಾಯಿತಿ, ಹೊರತು ಉನ್ನತ ಹುದ್ದೆಗೆ ಏರಲು ಇರುವ ಮೆಟ್ಟಿಲಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಒಮ್ಮೆ ಹುದ್ದೆಯನ್ನು ಸ್ವೀಕರಿಸಿದ ನಂತರ, ಆ ಉದ್ಯೋಗಿಗೆ ಆ ಹುದ್ದೆ ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು.
ತನ್ನ ಶ್ರಮದ ಮೇಲೆ ಹುದ್ದೆ ಪಡೆದುಕೊಂಡ ವ್ಯಕ್ತಿಯ ಹೆಸರಿನಲ್ಲಿ (ಅನುಕಂಪ) ಅವರ ಅವಲಂಬಿತರು ಪಡೆದುಕೊಂಡರೆ, ನಿಜವಾದ ವ್ಯಕ್ತಿಗೆ ಏನೆಲ್ಲಾ ಸೌಲ್ಯಭ್ಯಗಳು ಸಿಗುತ್ತವೆಯೇ ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅನುಕಂಪದ ಹುದ್ದೆಯು ಆ ಕುಟುಂಬವು ಆರ್ಥಿಕ ನಷ್ಟ ಅನುಭವಿಸದಂತೆ ತಡೆಯುವ ಸಾಧನವಾಗಿದೆ. ಇದನ್ನೇ ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ವಾಕ್ಯಗಳಲ್ಲಿ ವಿವರಿಸಿದೆ.
ಅನುಕಂಪದ ನೇಮಕಾತಿಯ ಮುಖ್ಯ ಉದ್ದೇಶ ತಕ್ಷಣದ ಆರ್ಥಿಕ ನೆರವು ನೀಡುವುದೇ ಹೊರತು, ಉದ್ಯೋಗಿಯ ಸ್ಥಾನಮಾನ ಹೆಚ್ಚಿಸುವುದಲ್ಲ. ಏನೇ ಅರ್ಹತೆ ಇದ್ದರೂ ಪಡೆದ ಹುದ್ದೆಗೆ ಮಾತ್ರ ಸೀಮಿತ:ಅನುಕಂಪದ ಆಧಾರದ ಮೇಲೆ ನಡೆಯುವ ನೇಮಕಾತಿ ಸಂಪೂರ್ಣವಾಗಿ ಮಾನವೀಯ ಆಧಾರದ ಮೇಲೆ ಇರುತ್ತದೆ. ಹುದ್ದೆ ಪಡೆದವರಿಗೆ ಹೆಚ್ಚಿನ ಅರ್ಹತೆ ಇದೆ ಎಂಬ ಕಾರಣಕ್ಕೆ ಅವರನ್ನು ಉನ್ನತ ಹುದ್ದೆಗೆ ಪದೋನ್ನತಿ ನೀಡಲು ಅವಕಾಶವಿಲ್ಲ. ಅವರು ಏನೇ ಅರ್ಹತೆ ಹೊಂದಿದ್ದರೂ, ಅದು ಅನುಕಂಪದ ಆಧಾರದ ಮೇಲೆ ಪಡೆದ ಹುದ್ದೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪೀಠವು ಹೇಳಿದೆ.















