ಮನೆ ಅಪರಾಧ ಈಗಲ್ ಟನ್ ವಿಲ್ಲಾದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಬಂಧನ

ಈಗಲ್ ಟನ್ ವಿಲ್ಲಾದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಬಂಧನ

0

ಬೆಂಗಳೂರು: ಈಗಲ್‌ಟನ್‌ ರೆಸಾರ್ಟ್‌ನ ವಿಲ್ಲಾ​ದಲ್ಲಿ ಸೋಮವಾರ ನಡೆ​ದಿದ್ದ ವೃದ್ಧ ದಂಪ​ತಿ ಕೊಲೆ ಪ್ರಕ​ರಣಕ್ಕೆ ಸಂಬಂಧಿ​ಸಿ​ದಂತೆ ಓರ್ವ ಆರೋ​ಪಿ​ಯನ್ನು ಬಿಡದಿ ಠಾಣೆ ಪೊಲೀ​ಸರು ಬಂಧಿ​ಸಿದ್ದು, ಮನೆ ಕೆಲಸ ಮಾಡಿಕೊಂಡಿದ್ದ ಬಿಹಾರ ಮೂಲದ ಜೋಗೀಂದರ್‌ ಯಾದವ್‌(23) ಬಂಧಿತ ಆರೋಪಿಯಾಗಿರುವುದು ವಿಪರ್ಯಾಸ.

ಮತ್ತೊಬ್ಬ ಆರೋ​ಪಿ​, ಬಂಧಿತನ ಸಂಬಂಧಿ ರವೀಂದ್ರ ಯಾದವ್‌ ಪರಾ​ರಿ​ಯಾ​ಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇಂಡಿ​ಯನ್‌ ಏರ್‌ಫೋರ್ಸ್‌ನಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದ ರಘು​ರಾ​ಜನ್‌ ಐದು ವರ್ಷ​ಗಳ ಹಿಂದೆ ನಿವೃ​ತ್ತಿ​ಯಾಗಿದ್ದು, ಪತ್ನಿ ಆಶಾ ಜತೆ ಈಗಲ್‌ಟನ್‌ ರೆಸಾರ್ಟ್‌ನ ವಿಲ್ಲಾ​ದಲ್ಲಿ ವಾಸ​ವಿ​ದ್ದರು. ಈ ದಂಪತಿ ಪುತ್ರ ಮತ್ತು ಪುತ್ರಿ ದೆಹ​ಲಿ​ಯಲ್ಲಿ ಉದ್ಯೋ​ಗ​ದ​ಲ್ಲಿ​ದ್ದ ಕಾರಣ ಇವ​ರಿ​ಬ್ಬರೇ ಮನೆ​ಯ​ಲ್ಲಿ​ದ್ದರು. ಮನೆ​ಗೆ​ಲಸ ಹಾಗೂ ನಾಯಿ ನೋಡಿಕೊಳ್ಳಲು ಬಿಹಾರ ಮೂಲದ ಜೋಗಿಂದರ್‌ ಯಾದವ್‌ನನ್ನು ನಿಯೋ​ಜಿ​ಸಿ​ಕೊಂಡಿ​ದ್ದರು. ಸೋಮ​ವಾರ ರಾತ್ರಿ ಮತ್ತು ಮಂಗ​ಳ​ವಾರ ಬೆಳಗ್ಗೆ ದಂಪತಿ ಕರೆ ಸ್ವೀಕ​ರಿ​ಸ​ದಿ​ದ್ದಾಗ ಪುತ್ರ ಅನುಮಾನಗೊಂಡು, ರೆಸಾರ್ಟ್‌ನ ಸೆಕ್ಯೂ​ರಿಟಿ ಗಾರ್ಡ್‌ನನ್ನು ಸಂಪ​ರ್ಕಿಸಿ ಮನೆ​ಗೆ ಹೋಗಿ ಬರು​ವಂತೆ ತಿಳಿ​ಸಿ​ದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಹಣದಾಸೆಗಾಗಿ ಕೊಲೆ: ಮೂರು ವರ್ಷದ ಹಿಂದೆ ರಾಜನ್‌ರ ಮನೆಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ ಆರೋಪಿ, ಹಣದಾಸೆಗಾಗಿ ವೃದ್ಧ ದಂಪತಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ತಿಂಗಳ ಹಿಂದೆ ಕೆಲಸದ ವೇಳೆ ಆರೋಪಿಯು ರಾಜನ್‌ರಿಗೆ ಗೊತ್ತಾಗದಂತೆ ಅವರ ಮೊಬೈಲ್‌ ಬಳಸಿ ಅವರ ಗೂಗಲ್‌ ಪೇ ಖಾತೆಯಿಂದ ತನ್ನ ಸ್ನೇಹಿತನ ಖಾತೆಗೆ 70 ಸಾವಿರ ಹಣ ವರ್ಗಾಯಿಸಿಕೊಂಡಿದ್ದ. ರಾಜನ್ ದಂಪತಿ ಖಾತೆಯಲ್ಲಿ ಭಾರಿ ಹಣ ಇರಬಹುದು ಎಂಬ ನಿರ್ಧಾರಕ್ಕೆ ಬಂದ ಆರೋಪಿ ಆ ಹಣ ಲಪಟಾಯಿಸುವ ಸಲುವಾಗಿ ಸ್ನೇಹಿತನ ಜೊತೆಗೂಡಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಬಾರಿ ರಾಜನ್ ಮೊಬೈಲ್‌ನಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ವೇಳೆ ಯಾವುದೇ ಪಾರ್ಸ್‌ವರ್ಡ್‌ ಕೇಳಿರಲಿಲ್ಲ. ಕೇವಲ ಒಟಿಪಿ ಆಧರಿಸಿ ಹಣ ವರ್ಗಾವಣೆ ಆಗಿತ್ತು. ಹೀಗಾಗಿ ಈ ಬಾರಿಯೂ ಅಷ್ಟೇ ಸುಲಭವಾಗಿ ಹಣ ಕಳುಹಿಸಿಕೊಳ್ಳಬಹುದು ಎಂಬುದು ಆರೋಪಿಗಳ ಅಂದಾಜಾಗಿತ್ತು. ಆದರೆ ಈ ಬಾರಿ ಪಾಸ್‌ವರ್ಡ್ ಬದಲಾಗಿದ್ದು, ಆ್ಯಪ್‌ ಲಾಕ್‌ ಆದ ಕಾರಣಕ್ಕೆ ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಸಾಧ್ಯವಾಗಲಿಲ್ಲ. ಕಡೆಗೆ ಮನೆಯಲ್ಲಿದ್ದ ಒಡವೆಗಳನ್ನು ಗಂಟು ಕಟ್ಟಿಟ್ಟುಕೊಂಡಿದ್ದ ಆರೋ‍ಪಿ ಅದರ ಜೊತೆ ಪರಾರಿ ಆಗಲು ಯೋಜಿಸಿದ್ದ. ಆದರೆ ಕಡೆಯ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಮನೆಗೆ ಬಂದ ಕಾರಣಕ್ಕೆ ಗಾಬರಿಯಲ್ಲಿ ಒಡವೆ ಗಂಟು ಅಲ್ಲಿಯೇ ಬಿಟ್ಟು 50 ಸಾವಿರ ನಗದು ಜೊತೆ ಅಲ್ಲಿಂದ ಪರಾರಿ ಆಗಿದ್ದಾನೆ.

ಹಿಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ
ಮುಂದಿನ ಲೇಖನಸೋಮವಾರ ಬಹುತೇಕ ಶಾಲೆ ಓಪನ್: ಸಚಿವ ಬಿ.ಸಿ.ನಾಗೇಶ್