ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ ಕೊಲೆ ಕೇಸ್ ಕುರಿತು ವಿಚಾರಣೆ ಎದುರಿಸುತ್ತಿದ್ದ ಕರುಣಾಕರ ದೇವಾಡಿಗ (23) ಎಂಬ ವ್ಯಕ್ತಿಯು ಜೈಲಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ನಾಲ್ಕು ತಿಂಗಳ ಹಿಂದೆ ಭದ್ರಾವತಿ ನಗರದ ದೇವಸ್ಥಾನದ ಬಳಿ ಅನಾಥ ಅಜ್ಜಿಯ ಬಳಿ ಇದ್ದ ಹಣ ದೋಚಿ, ಬಳಿಕ ಅಜ್ಜಿಯನ್ನು ಮರ್ಡರ್ ಮಾಡಿ ಕರುಣಾಕರ್ ಎಸ್ಕೇಪ್ ಆಗಿದ್ದನು. ಬಳಿಕ ಇತನನ್ನು ಬಂಧಿಸುವಲ್ಲಿ ಭದ್ರಾವತಿ ಪೊಲೀಸರು ಯಶಸ್ವಿಯಾಗಿದ್ದರು.
ಭದ್ರಾವತಿ ತಾಲೂಕಿನ ಬಾರಂದೂರಿನ ನಿವಾಸಿಯಾಗಿರುವ ಕರುಣಾಕರ್ ಕಳೆದ ನಾಲ್ಕು ತಿಂಗಳಿನಿಂದ ಸೆಂಟ್ರಲ್ ಜೈಲಿನಲ್ಲಿದ್ದನು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕರೆತರಲಾಗಿತ್ತು. ಈ ವೇಳೆ ಪತ್ನಿ, ಅತ್ತೆ ಮತ್ತು ಸಂಬಂಧಿಕರು ಶವಾಗಾರ ಎದುರು ನೋವು ತೋಡಿಕೊಂಡರು.
ಕೊಲೆ ಕೇಸ್ನಲ್ಲಿ ಬಂಧನಕ್ಕೊಳಗಾಗಿದ್ದ ಕರುಣಾಕರ್ ಇನ್ನು ವಿಚಾರಣೆ ಎದುರಿಸುತ್ತಿದ್ದನು. ಕುಟುಂಬಸ್ಥರು ಕರುಣಾಕರ್’ಗೆ ಬೇಲ್’ಗಾಗಿ ಪ್ರಯತ್ನ ಮಾಡುತ್ತಿದ್ದರು. ಈ ನಡುವೆ ಕರುಣಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದು ಮಾತ್ರ ನಿಗೂಢವಾಗಿದೆ. ತುಂಗಾ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.















