ಮನೆ ಕಾನೂನು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಸಿಂಗ್ ವಿರುದ್ಧ ಇಂದೇ ಎಫ್’ಐಆರ್ ದಾಖಲಿಸುವುದಾಗಿ ತಿಳಿಸಿದ ದೆಹಲಿ ಪೊಲೀಸರು

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಸಿಂಗ್ ವಿರುದ್ಧ ಇಂದೇ ಎಫ್’ಐಆರ್ ದಾಖಲಿಸುವುದಾಗಿ ತಿಳಿಸಿದ ದೆಹಲಿ ಪೊಲೀಸರು

0

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್’ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಇಂದೇ (ಶುಕ್ರವಾರ) ಎಫ್ಐಆರ್ ದಾಖಲಿಸುವುದಾಗಿ ದೆಹಲಿ ಪೊಲೀಸರು ಶುಕ್ರವಾರ ಸುಪ್ರೀಂ ಕೋರ್ಟ್’ಗೆ ತಿಳಿಸಿದ್ದಾರೆ.

Join Our Whatsapp Group

ಈ ವಿಚಾರವನ್ನು ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠಕ್ಕೆ ತಿಳಿಸಿದರು. ಹೇಳಿಕೆಯನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿದೆ.

“ಆರೋಪಿಗಳು ಸಂಜ್ಞೇಯ ಅಪರಾಧ ಎಸಗಿರುವುದು ಕಂಡುಬಂದಿರುವುದರಿಂದ ಮೊದಲ ಪ್ರತಿವಾದಿ (ದೆಹಲಿ ಪೊಲೀಸರು) ಎಫ್’ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ” ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಅಪ್ರಾಪ್ತ ವಯಸ್ಕರಲ್ಲಿ ಒಬ್ಬರಿಗೆ ಬೆದರಿಕೆ ಒಡ್ಡಲಾಗಿದೆ ಎಂಬ ಅಂಶವನ್ನು ಪರಿಗಣಿಸುವ ಸಲುವಾಗಿ ನ್ಯಾಯಾಲಯ ಪ್ರಕರಣವನ್ನು ಬರುವ ವಾರಕ್ಕೆ ಮುಂದೂಡಿತು.

ಕೃತ್ಯದ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕುಸ್ತಿಪಟುಗಳು ಕಳೆದ ಕೆಲ ದಿನಗಳಿಂದ ದೆಹಲಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಎಫ್’ಐಆರ್ ದಾಖಲಿಸುವಂತೆ ಕೋರಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಮನವಿಯನ್ನು ಆಲಿಸಲು ಏಪ್ರಿಲ್ 25ರಂದು  ಸುಪ್ರೀಂ ಕೋರ್ಟ್ ಸಮ್ಮತಿಸಿತ್ತು.  ಕುಸ್ತಿಪಟುಗಳು ಎತ್ತಿರುವ ಆರೋಪಗಳು ಗಂಭೀರವಾಗಿದ್ದು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತ್ತು.

ಅದಾದ ಒಂದು ದಿನದ ಬಳಿಕ ಅಂದರೆ ಏಪ್ರಿಲ್ 26 ರಂದು ಯಾವುದೇ ಎಫ್’ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿದೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದ್ದರು.

ಶುಕ್ರವಾರ ಪ್ರಕರಣದ ವಿಚಾರಣೆ ನಡೆದಾಗ, ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲಿದ್ದಾರೆ. ಹೀಗಾಗಿ ಆಲಿಸಲು ಯಾವ ಅಂಶವೂ ಇಲ್ಲದಿರುವುದರಿಂದ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದು ಎಸ್ಜಿ ಮೆಹ್ತಾ ಕೋರಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯ ಮೇಲ್ವಿಚಾರಣೆ ನಡೆಯಬೇಕು. ಇವರು ರಾಷ್ಟ್ರಕ್ಕಾಗಿ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿದ ಹುಡುಗಿಯರು. ನನ್ನ ಮಾತನ್ನು ನೀವು ಒಪ್ಪಲೇಬೇಕು. ಸಂತ್ರಸ್ತರಲ್ಲಿ ಅಪ್ರಾಪ್ತ ವಯಸ್ಕರೊಬ್ಬರಿಗೆ ಬೆದರಿಕೆ ಇದೆ ಎನ್ನಲಾಗಿದೆ” ಎಂದು ತಿಳಿಸಿದರು.

ಆ ಅಪ್ರಾಪ್ತ ಬಾಲಕಿಯ ಸುರಕ್ಷತೆಗೆ ಅಪಾಯವಿದೆ ಎಂಬ  ಅಫಿಡವಿಟನ್ನು ಮುಚ್ಚಿದ ಲಕೋಟೆಯಲ್ಲಿ ಅವರು ಸಲ್ಲಿಸಿದರು. ಆದರೆ ತನಿಖೆಯ ವಿಧಾನಗಳನ್ನು ಪೊಲೀಸ್ ಆಯುಕ್ತರು ನಿರ್ಧರಿಸಬೇಕು ಎಂದು ಎಸ್ ಜಿ ಹೇಳಿದರು.

“ಎಫ್ಐಆರ್ ದಾಖಲಾಗದೇ ಇದ್ದರೆ ಅದಕ್ಕೆ ಸೆಕ್ಷನ್ 156(3) ರ ಅಡಿ ಪರಿಹಾರವಿದೆ. ಆದರೆ ಸಂಜ್ಞೇಯ ಅಪರಾಧವಿದ್ದಾಗ ಎಫ್ಐಆರ್ ದಾಖಲಿಸಿಕೊಳ್ಳಿ ಎಂದಿದ್ದೇವೆ. ಇಲ್ಲಿ ಬೇರೇನೋ ಆಟ ನಡೆಯುತ್ತಿದೆ ಎಂದು ಅನಿಸುತ್ತಿದೆ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಹೆಚ್ಚಿನದನ್ನು ಹೇಳಲಾರೆ” ಎಂದು ಅವರು ವಿವರಿಸಿದರು.

ನಂತರ ಕಕ್ಷಿದಾರರ ವಾದ ಆಲಿಸಿದ ನ್ಯಾಯಾಲಯ ಎಫ್’ಐಆರ್ ದಾಖಲಿಸಲಾಗುವುದು ಎಂಬ ಎಸ್’ಜಿ ಅವರ ಹೇಳಿಕೆಯನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿತು.

ಅಪ್ರಾಪ್ತ ಬಾಲಕಿಗೆ ಬೆದರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಗೆ ಭದ್ರತೆ ಒದಗಿಸಬೇಕು ಎಂದು ಸೂಚಿಸಿತು. ಅಲ್ಲದೆ, ಬೆದರಿಕೆ ವಿಷಯ ಕುರಿತಂತೆ ತನಿಖೆ ನಡೆಸಿ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಬರುವ ವಾರ ನಡೆಯಲಿದೆ.

ಹಿಂದಿನ ಲೇಖನಕಡುಭ್ರಷ್ಟ ಸರ್ಕಾರ ಸಿದ್ದರಾಮಯ್ಯನವರದ್ದು: ಸಿಎಂ ಬೊಮ್ಮಾಯಿ
ಮುಂದಿನ ಲೇಖನಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ