ಮನೆ ದೇವಸ್ಥಾನ ಬೂದನೂರಿನ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ

ಬೂದನೂರಿನ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ

0

ಹೊಯ್ಸಳ  ದೊರೆಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಬೃಹತ್ ಭವ್ಯ ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಕರ್ನಾಟಕವನ್ನು ಕಲೆಗಳ ಬೀಡಾಗಿ ಮಾಡಿದ್ದಾರೆ. ಸಕ್ಕರೆಯ ನಾಡು ಮಂಡ್ಯದಲ್ಲಿ ಕೂಡ ಇಂಥ ಹಲವು ಪುರಾತನ ಹೊಯ್ಸಳ ದೇವಾಲಯಗಳಿವೆ. ಇವುಗಳಲ್ಲಿ ಬೂದನೂರಿನ ಅನಂತಪದ್ಮನಾಭಸ್ವಾಮಿ ದೇವಾಲಯವೂ ಒಂದು.

ಮದ್ದೂರು – ಮಂಡ್ಯ ನಡುವೆ ಇರುವ ಈ ಊರು ಬೆಂಗಳೂರು ಮೈಸೂರು ಹೆದ್ದಾರಿಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಹಿಂದೆ ಈ ಊರಿಗೆ ಶ್ರೀಮದ್ ಸರ್ವಜ್ಞಪದುಮನಾಭಪುರ ಎಂಬ ಹೆಸರಿತ್ತಂತೆ. 1236ರಲ್ಲಿ ಹೊಯ್ಸಳರ ದೊರೆ ಮೂರನೇ ನರಸಿಂಹ ಇಲ್ಲಿ  ನಿರ್ಮಿಸಿದ್ದು ಕೇಶವ ದೇವಾಲಯವೇ ಆದರೂ ಪದುಮನಾಭಪುರದಲ್ಲಿನ ಈ ದೇಗುಲ ಸಹಜವಾಗೇ ಪದ್ಮನಾಭ ದೇವಸ್ಥಾನವಾಗಿ ಖ್ಯಾತಿ ಪಡೆಯಿತಂತೆ. ಸಾಮಾನ್ಯವಾಗಿ ಅನಂತಪದ್ಮನಾಭ ಎಂದೊಡನೆ ಆದಿಶೇಷನ ಮೇಲೆ ಮಲಗಿರುವ, ಹೊಕ್ಕಳಿಂದ ಕಮಲ ಹೊರಹೊಮ್ಮಿರುವ ಅದರಲ್ಲಿ ಬ್ರಹ್ಮದೇವರು ಕುಳಿತಿರುವ ಚಿತ್ರಣ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಆದರೆ ಬೂದನೂರಿನ ಈ ದೇವಾಲಯದಲ್ಲಿ ಪದ್ಮನಾಭಸ್ವಾಮಿ ನಿಂತಿರುವ ಭಂಗಿಯಲ್ಲಿರುವುದು ವಿಶೇಷ.

ಈ ದೇಗುಲದ ಪೂಜಾ ಕೈಂಕರ್ಯಕ್ಕಾಗಿ ಗುತ್ತಲು ಗ್ರಾಮದ ಕೇಶವ ಸ್ಥಾನಿಕ ನಂಬಿಪಿಳ್ಳೈ ವಂಶಸ್ಥರು ದತ್ತಿ ಕೊಟ್ಟಿದ್ದರು ಎಂದೂ ಶಾಸನದಲ್ಲಿ ಉಲ್ಲೇಖವಿದೆ. ಹೊಯ್ಸಳರ ದೊರೆ ವೀರನಾರಸಿಂಹ 1098ರ ಧಾತು ನಾಮಸಂವತ್ಸರದ ಪುಷ್ಯ ಶುದ್ಧ ಸೋಮವಾರದಂದು ಈ ದೇವಾಲಯ ನಿರ್ಮಿಸಿದ ಎಂದು ಇಲ್ಲಿರುವ ಶಾಸನ ಸಾರುತ್ತದೆ.

ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ, ಗುತ್ತಲು, ಅರಕೆರೆ, ಮದ್ದೂರು ಮತ್ತು ಮಂಡ್ಯದ ಹಲವು ಮನೆತನಗಳಿಗೆ ನೂರಾರು ವರ್ಷಗಳಿಂದಲೂ ಪದ್ಮನಾಭ ಕುಲದೇವರು. ರಾಜ್ಯದ ಮೂಲೆ ಮೂಲೆಯಲ್ಲೂ ಈ ದೇವರಿಗೆ ಭಕ್ತರಿದ್ದಾರೆ.

ಅನಂತಪದ್ಮನಾಭ ಸ್ವಾಮಿ ದೇವಾಲಯ ಹೊಯ್ಸಳರ ಕಾಲದ ನಿರ್ಮಾಣವಾಗಿದ್ದು, ನಕ್ಷತ್ರಾಕಾರದ ಜಗಲಿಯ ಮೇಲಿದೆ. ಮುಖಮಂಟಪ, ದೂರದ ಊರಿನಿಂದ ಬರುವ ಭಕ್ತರು ಕುಳಿತು ವಿಶ್ರಮಿಸಿಕೊಳ್ಳಲು ಕಲ್ಲಿನ ಸೋಪಾನ, ಛಾವಣಿಯಲ್ಲಿ ಕಲಾತ್ಮಕ ಭುವನೇಶ್ವರಿ ಇದ್ದು, ಪ್ರಧಾನದ್ವಾರದ ಬಾಗಿಲವಾಡದಲ್ಲೂ ಅಪರೂಪದ ಕೆತ್ತನೆಗಳಿವೆ.

ಇನ್ನು ಎಲ್ಲ ಹೊಯ್ಸಳ ದೇವಾಲಯಗಳಂತೆ ಇಲ್ಲಿಯೂ ನವರಂಗ, ಸುಖನಾಸಿ, ಭುವನೇಶ್ವರಿ, ಅಂತರಾಳ, ಗರ್ಭಗೃಹ, ಜಾಲಂದ್ರಗಳಿವೆ.  &ಭುವನೇಶ್ವರಿಗಳಲ್ಲಿ ಸುಂದರ ಕೆತ್ತನೆಗಳಿವೆ. ನವರಂಗದಲ್ಲಿ ಲೇತ್ ನಿಂದ ತಿರುಗಿಸಿ ಮಾಡಿದ ಬೃಹತ್ ವೃತ್ತಾಕಾರದ ಕಂಬಗಳಿವೆ. ಇನ್ನು ಹೊರಭಿತ್ತಿಗಳಲ್ಲಿ ಪುರಾಣ, ಪುಣ್ಯಕಥೆ, ಭಾಗವತದ ಚಿತ್ತಾರಗಳಿಲ್ಲದಿದ್ದರೂ, ಅರೆಕಂಬಗಳಿಂದ ಕೂಡಿದ ಸಾಧಾರಣ ಕೆತ್ತನೆಯ ಭವ್ಯ ದೇವಾಲಯ ಇದಾಗಿದೆ. ಹೊಯ್ಸಳರ ದೇವಾಲಯ ವಾಸ್ತು ಶಿಲ್ಪದ ಆರಂಭದ ಕಾಲದಲ್ಲಿ ನಿರ್ಮಿಸಿರಬಹುದಾ ದೇವಾಲಯ ಇದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಗರ್ಭಗುಡಿಯ ಮೇಲಿರುವ ಗೋಪುರ ಕಲಾತ್ಮಕವಾಗಿದೆ. ಸಂಪೂರ್ಣ ಶಿಥಿಲವಾಗಿದ್ದ ಈ ದೇವಾಲಯವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದ್ದು, ಪುನರ್ ನಿರ್ಮಾಣ ಮಾಡಲಾಗಿದೆ.

ಗರ್ಭಗುಡಿಯ ಬಾಗಿಲಿನಲ್ಲಿರುವ ಲಿಂಗಾಕಾರದ ಆಕೃತಿ ಹಿಂದೆ ಇದು ಶೈವ ದೇವಾಲಯವಾಗಿತ್ತೆಂಬ ಸುಳಿವು ನೀಡುತ್ತದೆ. ಮಂಡ್ಯ ಜಿಲ್ಲೆಯ ತೊಣ್ಣೂರು, ಮೇಲುಕೋಟೆಗಳಲ್ಲಿ ರಾಮಾನುಜಾಚಾರ್ಯರು ನೆಲೆಸಿದ್ದ ಕಾಲದಲ್ಲಿ ಈ ಪ್ರದೇಶದಲ್ಲಿ ಶ್ರೀವೈಷ್ಣವರ ಪ್ರಭಾವ ಹೆಚ್ಚಾಗಿದ್ದ ಕಾರಣ ಇದು ಪದ್ಮನಾಭನ ದೇವಾಲಯವಾಗಿ ಮಾರ್ಪಟ್ಟಿರಬಹುದು ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಮೂಲ ವಿಗ್ರಹದ ಮೇಲೆ ನರಸಿಂಹದೇವರ ಕೆತ್ತನೆ ಇರುವುದೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಪ್ರಸ್ತುತ ಈ ದೇವಾಲಯ ಹರಿ ಹರರಲ್ಲಿ ಭೇದವಿಲ್ಲ ಎಂಬುದನ್ನು ಸಾರುತ್ತಲಿದೆ. ದೇವಾಲಯದಲ್ಲಿ ಗಣಪತಿ ಹಾಗೂ ಲಕ್ಷ್ಮೀ ದೇವಿಯ ಸುಂದರ ಮೂರ್ತಿಯೂ ಇದೆ.

ಪ್ರಧಾನಗರ್ಭಗೃಹದಲ್ಲಿ ಮೂರು ಅಡಿಯ ಗರುಡ ಪೀಠದ ಮೇಲೆ ನಿಂತಿರುವ ಅನಂತಪದ್ಮನಾಭಸ್ವಾಮಿಯ ಮೂಲ ಮೂರ್ತಿ ಅತ್ಯಂತ ಆಕರ್ಷಕವಾಗಿದೆ. ಸುಮಾರು 5 ಅಡಿ ಎತ್ತರದ ಶಂಖ, ಚಕ್ರ, ಗದಾ, ಪದ್ಮ ಹಿಡಿದ ಚತುರ್ಭಜ ಭವ್ಯ ಮೂರ್ತಿಯು ಸೂಕ್ಷ್ಮ ಕೆತ್ತನೆಗಳಿಂದ ಕಂಗೊಳಿಸುತ್ತದೆ.  ನಿತ್ಯ ಇಲ್ಲಿ ಶ್ರೀವೈಷ್ಣವ ಸಂಪ್ರದಾಯದ ರೀತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ.  ಸರ್ಕಾರ ಈಗ ಇದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ರಕ್ಷಿಸಿದೆ.