ಮನೆ ಸುದ್ದಿ ಜಾಲ ಗುಣಾತ್ಮಕ ಹಾಲು ಉತ್ಪಾದನೆಗೆ ಪಶು ಆಹಾರ ತಯಾರಿಕಾ ಘಟಕ ಆರಂಭಿಸಲಾಗುವುದು: ಸಚಿವ ಎಸ್.ಟಿ. ಸೋಮಶೇಖರ್

ಗುಣಾತ್ಮಕ ಹಾಲು ಉತ್ಪಾದನೆಗೆ ಪಶು ಆಹಾರ ತಯಾರಿಕಾ ಘಟಕ ಆರಂಭಿಸಲಾಗುವುದು: ಸಚಿವ ಎಸ್.ಟಿ. ಸೋಮಶೇಖರ್

0

ಮೈಸೂರು (Mysuru): ಗುಣಾತ್ಮಕ ಹಾಲು ಉತ್ಪಾದನೆಗೆ ಪೂರಕವಾಗುವಂತೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಪಶು ಆಹಾರ ತಯಾರಿಕಾ ಘಟಕ ಆರಂಭಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ತಿಳಿಸಿದರು.

ವಿಜಯಕರ್ನಾಟಕ, ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಕರ್ನಾಟಕ ಹಾಲು ಒಕ್ಕೂಟ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಕರುನಾಡ ಹೈನು-ಹೊನ್ನು ಜಿಲ್ಲಾ ಹೈನುಗಾರರ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚು ಪ್ರಮಾಣದಲ್ಲಿ ಹಾಲು ಉತ್ಪಾದಿಸುವುದೇ ಕರ್ನಾಟಕ ಹಾಲು ಒಕ್ಕೂಟದ ಗುರಿಯಾಗಿರದೇ ಗುಣಾತ್ಮಕ ಹಾಲು ಉತ್ಪಾದಿಸಿ ರೈತರಿಗೆ ಹೆಚ್ಚು ಲಾಭ ದೊರಕುವಂತೆ ಮಾಡುವುದು ಪ್ರಮುಖ ಗುರಿಯಾಗಿದೆ. ಹಸುಗಳು ಗುಣಾತ್ಮಕ ಹಾಲು ನೀಡಬೇಕಾದರೆ ಅದಕ್ಕೆ ಪೋಷಕಾಂಶಯುಕ್ತ ಆಹಾರ ನೀಡುವುದು ಮುಖ್ಯವಾಗಿದೆ. ಅದಕ್ಕಾಗಿ ಮೈಸೂರಿನ ಪಿರಿಯಾಪಟ್ಟಣದಲ್ಲಿ ಪಶು ಆಹಾರ ತಯಾರಿಕೆ ಕಾರ್ಖಾನೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಇದರಿಂದ ತಾಲೂಕಿನಲ್ಲಿ ಮೆಕ್ಕೆ ಜೋಳ ಬೆಳೆಯುವ ರೈತರಿಗೂ ಸಹಾಯವಾಗುತ್ತದೆ. ಸಾಕಷ್ಟು ಮಂದಿಗೆ ಉದ್ಯೋಗಾವಕಾಶವೂ ದೊರೆಯುತ್ತದೆ ಎಂದರು.

ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷರಾದ ಜಿ.ಡಿ. ಹರೀಶ್‌ಗೌಡ ಅವರು ಮಾತನಾಡಿ, ಲಕ್ಷಾಂತರ ಜನರ ಜೀವನಾಧಾರವಾಗಿರುವ ಹೈನುಗಾರಿಕೆ ಕೇವಲ ಆರ್ಥಿಕ ಬುನಾದಿಯಾಗಿರದೇ ಉದ್ಯಮವಾಗಿ ಬೆಳೆಯುವ ದೊಡ್ಡ ಅವಕಾಶಗಳ ಕಣಜ. ಸೂಕ್ತ ಮಾರ್ಗ ಅನುಸರಿಸಿ ಹೈನುಗಾರಿಕೆ ಮಾಡಿದರೆ ನೂರಾರು ಜನರಿಗೆ ಉದ್ಯೋಗ ನೀಡುವ ರಹದಾರಿ. ಹಾಲು ಉತ್ಪಾದನೆಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಇದರಿಂದ ಮನ್ನಣೆ, ಪ್ರೋತ್ಸಾಹ ದೊರೆಯುತ್ತದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಉತ್ಪಾದನೆಗಳ ಮಟ್ಟ ಕಡಿಮೆಯಾಗಿದ್ದಾಗ ಡಿಸಿಸಿ ಬ್ಯಾಂಕ್ ನಬಾರ್ಡ್ ಹಾಗೂ ಹಾಲು ಒಕ್ಕೂಟಗಳ ಸಂಘದ ಸಹಯೋಗದಲ್ಲಿ ದುಡಿಯುವ ಹಾಲು ಉತ್ಪಾದಕರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ 20 ಕೋಟಿಯನ್ನು ಶೂನ್ಯ ಬಂಡವಾಳದಲ್ಲಿ ಉದ್ಯಮವನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಲಾಯಿತು ಎಂದು ಹೇಳಿದರು.

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಕರ್ನಾಟಕ ಹಾಲು ಒಕ್ಕೂಟ ಸಹಯೋಗದಲ್ಲಿ ಆಯೋಜಿಸಿದ್ದ ಹೈನು-ಹೊನ್ನು, ಜಿಲ್ಲಾ ಹೈನುಗಾರರ ಸಮ್ಮೇಳನದಲ್ಲಿ ಮೈಸೂರು ಜಿಲ್ಲೆಯ 7 ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಐವರು ಸಾಧಕ ಹಾಲು ಉತ್ಪಾದಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ವಿಜಯ ಕರ್ನಾಟಕ ಪತ್ರಿಕೆ ಪ್ರಧಾನ ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿ, ರಮೇಶ್ ಉತ್ತಪ್ಪ, ಮೈಮುಲ್ ಅಧ್ಯಕ್ಷರಾದ ಪ್ರಸನ್ನ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಕುಮಾರ್ ಸೇರಿದಂತೆ ಹಾಲು ಒಕ್ಕೂಟದ ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಅಸ್ತಮಾ ಇರುವವರು ಬೆಲ್ಲ ಸೇವಿಸಿ
ಮುಂದಿನ ಲೇಖನರಜನಿಕಾಂತ್‌ ಅಭಿನಯದ ʻಜೈಲರ್‌ʼಸಿನಿಮಾ ಚಿತ್ರೀಕರಣ ಪ್ರಾರಂಭ