ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಕೇಣಿಯಲ್ಲಿ ಜೆ.ಎಸ್.ಡಬ್ಲು ಕಂಪನಿಯ ಖಾಸಗಿ ವಾಣಿಜ್ಯ ಬಂದರು, ನಿರ್ಮಾಣ ವಿರೋಧಿಸಿ ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ ಅಂಕೋಲ ಬಂದ್‌ಗೆ ಕರೆಕೊಟ್ಟಿದೆ.
ಇಂದು ಅಂಕೋಲದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್‌ಗೆ ವ್ಯಾಪಾರಿಗಳು ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಿದರು. ಇದರಿಂದಾಗಿ ಅಂಕೋಲ ನಗರ ಸಂಪೂರ್ಣ ಬಂದ್ ಆಗಿದೆ.
ಇನ್ನು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ನಗರದ ವಿವಿಧ ಭಾಗದಲ್ಲಿ ಮೆರವಣಿಗೆ ಮೂಲಕ ಜೆ.ಎಸ್.ಡಬ್ಲು ಕಂಪನಿಯ ಅಣಕು ಶವಯಾತ್ರೆ ಕೈಗೊಂಡು ಜೈ ಹಿಂದ್ ಸರ್ಕಲ್ ಬಳಿ ಸೇರಿದ ಪ್ರತಿಭಟನಾಗಾರರು ಸರ್ಕಾರ ಹಾಗೂ ಖಾಸಗಿ ಸಂಸ್ಥೆ ವಿರುದ್ಧ ಅಕ್ರೋಶ ಹೊರಹಾಕಿದರು.
ಕೇಣಿಯಲ್ಲಿ ಯಾವುದೇ ಕಾರಣಕ್ಕೂ ವಾಣಿಜ್ಯ ಬಂದರು ನಿರ್ಮಾಣವಾಗಬಾರದು. ಮೀನುಗಾರರ ಹಿತವನ್ನು ಸರ್ಕಾರ ಕಾಪಾಡಬೇಕು. ಮೀನುಗಾರರ ನೆಲೆಗೆ ಧಕ್ಕೆಯಾಗುತಿದ್ದು, ಈಗಾಗಲೇ ಹಲವು ಜಾಗವನ್ನು ಬಂದರಿಗಾಗಿ ಬಿಟ್ಟುಕೊಡಲಾಗಿದೆ .ಹೀಗಾಗಿ ಮತ್ತೆ ಮೀನುಗಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಪ್ರತಿಭಟನಾ ನಿರತ ಮೀನುಗಾರರು ಆಗ್ರಹಿಸಿದರು.














