ಮನೆ ರಾಷ್ಟ್ರೀಯ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್ ಸ್ಟರ್ ಅನಿಲ್ ದುಜಾನಾ ಎನ್ ಕೌಂಟರ್

ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್ ಸ್ಟರ್ ಅನಿಲ್ ದುಜಾನಾ ಎನ್ ಕೌಂಟರ್

0

ಮೀರತ್: ಮೀರತ್ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗ್ಯಾಂಗ್​​’ಸ್ಟರ್​​ ಅನಿಲ್ ದುಜಾನಾನನ್ನು ಎನ್‌’ಕೌಂಟರ್‌’ನಲ್ಲಿ ಹತ್ಯೆ ಮಾಡಿದೆ.

Join Our Whatsapp Group

ರಾಜಕಾರಣಿ, ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ನ ಮಗ ಅಸಾದ್ ಅಹ್ಮದ್ ಹಾಗೂ ಆತನ ಸಹಚರ ಗುಲಾಂ ಮೊಹಮ್ಮದ್ ನನ್ನು ಝಾನ್ಸಿಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಗುಂಡಿನ ಚಕಮಕಿಯಲ್ಲಿ ಕೊಂದ ಕೆಲವೇ ದಿನಗಳಲ್ಲಿ ಈ ಎನ್ಕೌಂಟರ್ ನಡೆದಿದೆ.

ಅನಿಲ ದುಜಾನಾ, ಗೌತಮ ಬುದ್ಧ ನಗರ ಜಿಲ್ಲೆಯ ಬಾದಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುಜಾನಾ ಎಂಬ ಗ್ರಾಮದ ನಿವಾಸಿಯಾಗಿದ್ದಾನೆ. ಈತ ನೈಜ ಹೆಸರು ಅನಿಲ್ ನಗರ್.

ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ತನ್ನ ಹವಾ ಇಟ್ಟುಕೊಂಡಿದ್ದ ಅನಿಲ್, ಜನರಲ್ಲಿ ಭೀತಿ ಮೂಡಿಸಿದ್ದ. ಈತ ತನ್ನದೇ ಸಂಘಟಿತ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಹತ್ಯೆಯಾದ ಗ್ಯಾಂಗ್ಸ್ಟರ್ ಮೇಲೆ 62 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 18 ಕೊಲೆ, ಸುಲಿಗೆ, ದರೋಡೆ, ಭೂ ಕಬಳಿಕೆ ಮತ್ತು ತೆರವು ಪ್ರಕರಣಗಳು ಸೇರಿವೆ.

ಮಯೂರ ವಿಹಾರ ಪ್ರದೇಶದಲ್ಲಿ ದಿಲ್ಲಿ ಪೊಲೀಸರು 2022ರ ಡಿಸೆಂಬರ್ ನಲ್ಲಿ ಅನಿಲ್ ದುಜಾನಾನನ್ನು ಬಂಧಿಸದ್ದರು. ಬಳಿಕ ಆತ ಜೈಲಿನಿಂದ ಹೊರಬಂದಿದ್ದ. ದುಜಾನಾ ಬಗ್ಗೆ ಸುಳಿವು ನೀಡಿದವರಿಗೆ ನೋಯ್ಡಾ ಪೊಲೀಸರು 50 ಸಾವಿರ ರೂ ಬಹುಮಾನ ಘೋಷಿಸಿದ್ದರೆ, ಬುಲಂದಶಹರ್ ಪೊಲೀಸರು 25 ಸಾವಿರ ರೂ ಬಹುಮಾನ ಪ್ರಕಟಿಸಿದ್ದರು. ಆತ 2012ರಿಂದಲೂ ಜೈಲಿನಲ್ಲಿದ್ದ. ಆದರೆ 2021ರಲ್ಲಿ ಆತನಿಗೆ ಜಾಮೀನು ದೊರಕಿತ್ತು. ನಂತರ ಹಳೆಯ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಆತನ ವಿರುದ್ಧ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

2012ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಸೆರೆಸಿಕ್ಕ ನಂತರ ಅನಿಲ್ ದುಜಾನಾ, ಇನ್ನಿಬ್ಬರು ಕ್ರಿಮಿನಲ್ ಗಳಾದ ರಣದೀಪ್ ಭಾಟಿ ಮತ್ತು ಅಮಿತ್ ಕಾಸನಾ ಸಹಾಯದೊಂದಿಗೆ ಜೈಲಿನ ಒಳಗಿನಿಂದಲೇ ತನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ನಡೆಸುತ್ತಿದ್ದ. ಜೈಲಿನಲ್ಲಿ ಕುಳಿತುಕೊಂಡೇ ಆತ ತನ್ನ ಸಹಚರರ ನೆರವಿನಿಂದ ಕೊಲೆ, ಸುಲಿಗೆ ಮತ್ತು ಇತರೆ ಕ್ರಿಮಿನಲ್ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದ.

ದುಜಾನಾ Vs ಭಾಟಿ ಗ್ಯಾಂಗ್ ವೈಷಮ್ಯ

ದುಜಾನಾ ಕುಟುಂಬ ಹಾಗೂ ಸುಂದರ್ ಭಾಟಿ ಗ್ಯಾಂಗ್ ನಡುವೆ ಬಹಳ ದೀರ್ಘಕಾಲದ ವೈಷಮ್ಯ ಇತ್ತು. 2012ರಲ್ಲಿ ದುಜಾನಾ ಮತ್ತು ಆತನ ಗ್ಯಾಂಗ್, ಸುಂದರ್ ಭಾಟಿ ಹಾಗೂ ಆತನ ನಿಕಟವರ್ತಿಗಳ ಮೇಲೆ ಎಕೆ- 47 ರೈಫಲ್ನಿಂದ ಗುಂಡಿನ ದಾಳಿ ನಡೆಸಿದ್ದ. ಸರ್ಕಾರಿ ಗುತ್ತಿಗೆಗಳನ್ನು ಪಡೆದುಕೊಳ್ಳುವುದು, ಕಬ್ಬಿಣದ ಕಂಬಿಗಳನ್ನು ಕದಿಯುವುದು ಮತ್ತು ಟೋಲ್ ಪ್ಲಾಜಾ ಗುತ್ತಿಗೆಗಳ ವಿಚಾರದಲ್ಲಿ ಈ ಎರಡೂ ಗ್ಯಾಂಗ್ ಗಳು ಅನೇಕ ಬಾರಿ ಮುಖಾಮುಖಿಯಾಗಿದ್ದವು. ಭಾಟಿ ಗ್ಯಾಂಗ್ ನಿಂದ ಬೆದರಿಕೆ ಇದ್ದ ಕಾರಣಕ್ಕೆ ಪೊಲೀಸರು ತಮ್ಮ ವಶದಲ್ಲಿದ್ದಾಗ ದುಜಾನಾನನ್ನು ಬುಲೆಟ್ ಪ್ರೂಫ್ ಜಾಕೆಟ್ ತೊಡಿಸಿ ಕರೆದೊಯ್ಯುತ್ತಿದ್ದರು.

ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ಪಟ್ಟಿಯಲ್ಲಿ ದುಜಾನಾ ಕೂಡ ಸೇರಿದ್ದ. ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್’ಐಎ), ಗೂಂಡಾ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.