ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದ್ದು, ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪಕ್ಷದ ಕಾರ್‍ಯಕರ್ತೆಯೊಬ್ಬರು ನೀಡಿದ ದೂರಿನ ಮೇರೆಗೆ, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಅವರೊಂದಿಗೆ ಅವರ ಬೆಂಬಲಿಗರಾದ ವಸಂತ್ ಹಾಗೂ ಚನ್ನಕೇಶವ್ ಎಂಬವರನ್ನೂ ಸೇರಿಸಿ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ಕಾರ್ಯಕರ್ತೆಯು ನೀಡಿರುವ ದೂರಿನ ಪ್ರಕಾರ, 2013 ರಲ್ಲಿ ಜೆ.ಪಿ ಪಾರ್ಕ್ ಪ್ರದೇಶದಲ್ಲಿರುವ ಶಾಸಕರ ಕಚೇರಿಯಲ್ಲಿ ಈ ದುಷ್ಕರ್ಮ ನಡೆದಿದ್ದು, ಇದು ಸಾಮೂಹಿಕ ಅತ್ಯಾಚಾರ ಎಂಬ ಅತ್ಯಂತ ಭೀಕರ ಮತ್ತು ಗಂಭೀರ ಆರೋಪವಾಗಿದೆ.
ದುಷ್ಕರ್ಮದ ಸಂದರ್ಭದಲ್ಲಿ ಅವಳಿಗೆ ಅಪರಿಚಿತ ವ್ಯಕ್ತಿಯಿಂದ ಇಂಜೆಕ್ಷನ್ ತಂದು ಇಂಜೆಕ್ಟ್ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆ ಇಂಜೆಕ್ಷನ್‌ನ ಪರಿಣಾಮವಾಗಿ ತಾನು ಇಡಿಆರ್ ಕಾಯಿಲೆಗೆ ಒಳಗಾಗಿದ್ದೇನೆ ಎಂಬುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೆಲ್ಲಾ ಸಹಿಸಲಾಗದೇ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಬಿಜೆಪಿ ಮುಖಂಡರು ಈ ಕುರಿತಾಗಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.














