ಮೈಸೂರು: ಮೈಸೂರು ಪಶ್ಚಿಮ ಆರ್ ಟಿಓ ನಲ್ಲಿ ಬಗೆದಷ್ಟು ಹಗರಣಗಳು ಬೆಳಕಿಗೆ ಬರುತ್ತಿದ್ದು, ಅನಧಿಕೃತ ನೌಕರರ ಕುರಿತು 35 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾದ ಬೆನ್ನಲ್ಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಮೈಸೂರು ಪಶ್ಚಿಮ ಆರ್ ಟಿಓದಲ್ಲಿ ಅನಧಿಕೃತವಾಗಿ ಮಾಲೀಕತ್ವ ವರ್ಗಾವಣೆ ಹಾಗೂ ಕಂತು ಕರಾರು ರದ್ದತಿ ಮಾಡಿರುವ ಮತ್ತೊಂದು ಹಗರಣದ ಕುರಿತು ದಾಖಲೆ ಲಭ್ಯವಾಗಿದೆ.

ವಾಹನದ(KA 45, EB2016) ಮೂಲ ಮಾಲೀಕರಾಗಿರುವ ವಾಹನದ ಮೇಲೆ ಮುತ್ತೂಟ್ ಫೈನಾನ್ಸ್ ನಲ್ಲಿ ಸಾಲ ಸೌಲಭ್ಯವನ್ನು ಪಡೆದಿದ್ದು, ವಾಹನ ಕೂಡ ಮಾಲೀಕರ ಸುಪರ್ದಿಯಲ್ಲಿದೆ. ಈ ವಾಹನವನ್ನು ಅವರು ಯಾರಿಗೂ ಮಾರಾಟ ಮಾಡಿರುವುದಿಲ್ಲ. ಜೊತೆಗೆ ಸಾಲದ ಕಂತನ್ನು ನಿಯಮಿತವಾಗಿ ಕಟ್ಟಿಕೊಂಡು ಬರುತ್ತಿರುತ್ತಾರೆ. ಆದರೆ ಮಾಲೀಕರ ಅರಿವಿಗೆ ಬಾರದಂತೆ ಮುತ್ತೂಟ್ ಫೈನಾನ್ಸ್ ಕರಾರನ್ನು ರದ್ದು ಮಾಡಿ, ಮಾಲೀಕತ್ವವನ್ನು ಚಾಮರಾಜನಗರ ಆರ್ ಟಿಓ ವ್ಯಾಪ್ತಿಗೆ ಬರುವ ಕೊಳ್ಳೇಗಾಲ ಗ್ರಾಮದ ನಿವಾಸಿಗೆ ಮೂಲ ಮಾಲೀಕರ ಗಮನಕ್ಕೆ ಬರದಂತೆ ಮತ್ತು ಸಾಲ ನೀಡಿದ ಮುತ್ತೂಟ್ ಫೈನಾನ್ಸ್ ಒಪ್ಪಿಗೆ ಪಡೆಯದೇ ಸಾಲದ ಕರಾರನ್ನು ರದ್ದುಗೊಳಿಸಿ ಬೇರೊಬ್ಬರಿಗೆ ವರ್ಗಾವಣೆ ಮಾಡಿರುವ ದಾಖಲೆ ಲಭ್ಯವಾಗಿದೆ.
ಸದರಿ ವಿಚಾರದ ಬಗ್ಗೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಮತ್ತೊಂದು ದೂರನ್ನು ಪ್ರದೀಪ್ ಕುಮಾರ್ ಅವರ ಸಹಯೋಗದೊಂದಿಗೆ ವಾಹನದ ಮಾಲೀಕರು ದಾಖಲಿಸಲಿದ್ದಾರೆ.














