ನವದೆಹಲಿ ಚಂದ್ರಯಾನ–3ರ ರೋವರ್ ಪ್ರಜ್ಞಾನ್ ಚಂದ್ರನ ಅಂಗಳದಲ್ಲಿ ಒಂದು ದಿನದ (ಭೂಮಿಯ 14 ದಿನಗಳು) ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಅಲ್ಲಿ ಕತ್ತಲು ಆವರಿಸಿರುವುದರಿಂದ, ಅದರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಉಪಕರಣಗಳನ್ನು (ಪೇಲೋಡ್) ಸ್ಲೀಪ್ ಮೋಡ್ ಗೆ ಹಾಕಲಾಗಿದೆ.
ಸ್ಲೀಪ್ ಮೋಡ್ ಪ್ರಕ್ರಿಯೆ ನಂತರ ಇಸ್ರೊ ಮತ್ತೊಂದು ಮಹತ್ವದ ಪ್ರಯೋಗವನ್ನು ಚಂದ್ರನ ಅಂಗಳದಲ್ಲಿ ಯಶಸ್ವಿಗೊಳಿಸಿದೆ.
ಚಂದ್ರನದಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್ ನಲ್ಲಿ ಸುಮಾರು 40 ಸೆಂ.ಮೀ. ಎತ್ತರಕ್ಕೆ ಲ್ಯಾಂಡರ್ ಹಾರಿಸಿ, ಬಳಿಕ 30 ರಿಂದ 40 ಸೆಂ. ಮೀ ಅಷ್ಟು ಪಕ್ಕಕ್ಕೆ ಲ್ಯಾಂಡ್ ಮಾಡಿಸಲಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೊ, “ಚಂದ್ರಯಾನ -3 ಮಿಷನ್: ವಿಕ್ರಮ್ ಮತ್ತೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ!” ಎಂದು ಬರೆದಿದೆ. ವಿಕ್ರಮ್ ಲ್ಯಾಂಡರ್ ತನ್ನ ಉದ್ದೇಶಿತ ಮಿಷನ್ ಗುರಿಗಳಿಗಿಂತ ಹೆಚ್ಚಿದನ್ನು ಸಾಧಿಸಿದೆ. ಇದು ಯಶಸ್ವಿಯಾಗಿ ಹಾಪ್ ಪ್ರಯೋಗಕ್ಕೆ ಒಳಗಾಗಿದೆ. ಸೂಚನೆಗಳ ಮೇರೆಗೆ ಅದು ಎಂಜಿನ್ ಗಳನ್ನು ಚಾಲನೆಗೊಳಿಸಿದೆ, ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು.” ಎಂದು ಇಸ್ರೊ ಹೇಳಿದೆ.”ಪ್ರಾಮುಖ್ಯತೆ?: ಈ ‘ಕಿಕ್-ಸ್ಟಾರ್ಟ್’ ಭವಿಷ್ಯದಲ್ಲಿ ಅಲ್ಲಿಂದ ಮರಳುವ ವಿಧಾನ ಮತ್ತು ಮಾನವ ಕಾರ್ಯಾಚರಣೆಗಳನ್ನು ಉತ್ತೇಜಿಸುತ್ತದೆ!” ಎಂದು ಇಸ್ರೊ ಇದೇ ಟ್ವೀಟ್ನಲ್ಲಿ ಬರೆದಿದೆ. ಅಂದರೆ ಮುಂದಿನ ದಿನಗಳಲ್ಲಿ ಚಂದ್ರನಲ್ಲಿಗೆ ಹೋಗಿ ಅಲ್ಲಿಂದ ಮತ್ತೆ ಮರಳುವ ಯೋಜನೆಗಳಿಗೆ ಈ ಸಂಶೋಧನೆ ಮಹತ್ತರವಾಗಿದೆ ಎಂದು ಇಸ್ರೊ ಹೇಳಿದೆ.
“ಎಲ್ಲ ವ್ಯವಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಆರೋಗ್ಯಕರವಾಗಿವೆ. ನಿಯೋಜಿಸಲಾದ ರ್ಯಾಂಪ್, ಚಾಸ್ಟೆ ಮತ್ತು ಐಎಲ್ಎಸ್ಎಗಳನ್ನು ಹಿಂದಕ್ಕೆ ಮಡಚಿ ಪ್ರಯೋಗದ ನಂತರ ಯಶಸ್ವಿಯಾಗಿ ಮರು ನಿಯೋಜಿಸಲಾಯಿತು.” ಎಂದು ಇಸ್ರೊ ಟ್ವೀಟ್ನಲ್ಲಿ ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ನ ಹಾಪ್ ಪ್ರಯೋಗದ ಯಶಸ್ಸು ಭಾರತದ ಬಾಹ್ಯಾಕಾಶ ಪರಿಶೋಧನಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ದೇಶದ ತಾಂತ್ರಿಕ ಮುಂದುವರಿಕೆಯನ್ನು ಪ್ರದರ್ಶಿಸುವುದಲ್ಲದೆ ಭವಿಷ್ಯದಲ್ಲಿ ಹೆಚ್ಚು ಮಹತ್ವಾಕಾಂಕ್ಷೆಯ ಚಂದ್ರಯಾನಗಳಿಗೆ ದಾರಿ ಮಾಡಿಕೊಡುತ್ತದೆ. ವಿಕ್ರಮ್ ಲ್ಯಾಂಡರ್ ನಿಂದ ಬರುತ್ತಿರುವ ಅಮೂಲ್ಯವಾದ ಡೇಟಾವನ್ನು ಇಸ್ರೋ ವಿಶ್ಲೇಷಿಸುತ್ತಲೇ ಇರುವುದರಿಂದ, ಹೆಚ್ಚಿನ ಮಾಹಿತಿಗಾಗಿ ಜಗತ್ತು ಕುತೂಹಲದಿಂದ ಕಾಯುತ್ತಿದೆ.
ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದ ವಿಕ್ರಮ್ ಲ್ಯಾಂಡರ್, ಚಂದ್ರನ ಪರಿಸರದ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ನಾಲ್ಕು ಪೇಲೋಡ್ ಗಳನ್ನು ಹೊತ್ತೊಯ್ದಿದೆ. ಇವುಗಳಲ್ಲಿ ಮೇಲ್ಮೈ ಪ್ಲಾಸ್ಮಾ ಸಾಂದ್ರತೆಯನ್ನು ಅಳೆಯುವ ರಂಭಾ ಕೂಡ ಸೇರಿದೆ. ಚಂದ್ರನ ಮಣ್ಣಿನ ಉಷ್ಣ ಗುಣಲಕ್ಷಣಗಳನ್ನು ಅಳೆಯುವ ಚಾಸ್ಟೆ, ಲ್ಯಾಂಡಿಂಗ್ ಸೈಟ್ ಸುತ್ತಲೂ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಐಎಲ್ ಎಸ್ ಎ, ಮತ್ತು ಚಂದ್ರನ ವ್ಯವಸ್ಥೆಯ ಚಲನಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಎಲ್ ಆರ್ ಎ ಗಳನ್ನು ಇದು ಹೊಂದಿದೆ.