ಮನೆ ಕಾನೂನು ಯುಎಪಿಎ ಅಡಿ ಯಾವುದೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಬಹುದು: ಹೈಕೋರ್ಟ್

ಯುಎಪಿಎ ಅಡಿ ಯಾವುದೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಬಹುದು: ಹೈಕೋರ್ಟ್

0

ಬೆಂಗಳೂರು(Bengaluru): ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಮಾತ್ರ ವಿಚಾರಣೆ ನಡೆಸಬೇಕೆಂದಿಲ್ಲ, ಇತರೆ ವ್ಯಕ್ತಿಗಳನ್ನೂ ಸಹ ವಿಚಾರಣೆಗೊಳಪಡಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಅಲ್ಲದೆ, ರುದ್ರೇಶ್ ಕೊಲೆ ಪ್ರಕರಣದಲ್ಲಿ ಆರೋಪಿಗಳಿಬ್ಬರಿಗೆ ಜಾಮೀನು ನೀರಾಕರಿಸಿದ್ದ ವಿಶೇಷ ಕೋರ್ಟ್ ಆದೇಶ ರದ್ದುಪಡಿಸಲು ಯಾವುದೇ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿದೆ. ಜತೆಗೆ, ಪ್ರಕರಣದ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಎನ್‌ಐಎ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿಗಳಾದ ರ್ಇಾನ್ ಪಾಷಾ ಹಾಗೂ ಮೊಹಮ್ಮದ್ ಮುಜೀಬ್ ಉಲ್ಲಾ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ನ್ಯಾಯಾಲಯದ ಆದೇಶವೇನು? “ಯುಎಪಿಎ ಸೆಕ್ಷನ್ 15ರಲ್ಲಿ ವ್ಯಾಖ್ಯಾನಿಸಲಾಗಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಯಾವುದೇ ವ್ಯಕ್ತಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆ ನಡೆಸಬಹುದು. ಆ ವ್ಯಕ್ತಿ ನಿಷೇಧಿತ ಉಗ್ರಗಾಮಿ ಸಂಘಟನೆಯ ಸದಸ್ಯನೇ ಆಗಿರಬೇಕೆಂದಿಲ್ಲ” ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿದೆ.

“ಯುಎಪಿಎ ಪ್ರಕರಣದಲ್ಲಿ ಕೇವಲ ನಿಷೇಧಿತ ಉಗ್ರಗಾಮಿ ಸಂಘಟನೆಗಳ ಸದಸ್ಯರನ್ನಷ್ಟೇ ವಿಚಾರಣೆ ನಡೆಸಬೇಕೆಂದಿಲ್ಲ. ಮೇಲಾಗಿ, ಪ್ರಕರಣದ ಆರೋಪಿಗಳು ಹಾಗೂ ಹತ್ಯೆಗೀಡಾದ ರುದ್ರೇಶ್ ನಡುವೆ ಯಾವುದೇ ಹಗೆತನವಿರಲಿಲ್ಲ. ಆರ್‌ಎಸ್‌ಎಸ್ ಸದಸ್ಯರಲ್ಲಿ ಭಯ ಮೂಡಿಸುವ ಉದ್ದೇಶದಿಂದಲೇ ಕೊಲೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಷನ್ ವಾದವಾಗಿದೆ. ಪ್ರಕರಣದ ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳನ್ನು ಪರಿಗಣಿಸಿ, ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆಂಬ ವಿಚಾರ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿಯೇ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಎನ್‌ಐಎ ವಾದವೇನು?

ಮೇಲ್ಮನವಿಗೆ ಆಕ್ಷೇಪಿಸಿದ್ದ ಎನ್‌ಐಎ ಪರ ವಕೀಲರು, ಯುಎಪಿಎ ಸೆಕ್ಷನ್ 15ರಲ್ಲಿ ವ್ಯಾಖ್ಯಾನಿಸಲಾಗಿರುವ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಜಾಮೀನು ನೀಡಲು ಕಾಯ್ದೆಯ ಸೆಕ್ಷನ್ 43-ಡಿ ಅಡಿಯಲ್ಲಿ ನಿರ್ಬಂಧವಿದೆ. ಜತೆಗೆ, ಭಯೋತ್ಪಾದಕ ಕೃತ್ಯವೆಸಗಿದವರಿಗೆ ಶಿಕ್ಷೆ ವಿಧಿಸಲು ಕಾಯ್ದೆಯ ಸೆಕ್ಷನ್ 16ರ ಅಡಿಯಲ್ಲಿ ಅವಕಾಶವಿದೆ. ಅದರ ಪ್ರಕಾರ ಭಯೋತ್ಪಾದಕ ಕೃತ್ಯವೆಸಗಿದ ‘ಯಾವುದೇ ವ್ಯಕ್ತಿ’ಯನ್ನು ವಿಚಾರಣೆಗೆ ಒಳಪಡಿಸಬಹುದಾಗಿದ್ದು, ಆ ವ್ಯಕ್ತಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಗಳ ಸದಸ್ಯರೇ ಆಗಿರಬೇಕೆಂದಿಲ್ಲ ಎಂದು ಹೇಳಿದ್ದರು.

ಅರ್ಜಿದಾರರ ವಾದ: ಅರ್ಜಿದಾರರು, ತಾವು ಪಿಎಫ್ಐ ಹಾಗೂ ಎಸ್‌ಡಿಪಿಐ ಸದಸ್ಯರಾಗಿದ್ದು ಇವು ನಿಷೇಧಿತ ಸಂಘಟನೆಗಳಲ್ಲ. ಆದ್ದರಿಂದ, ತಮ್ಮ ವಿರುದ್ಧದ ಪ್ರಕರಣದಲ್ಲಿ ಯುಎಪಿಎ ಸೆಕ್ಷನ್‌ಗಳನ್ನು ಅನ್ವಯಿಸಲು ಅವಕಾಶವಿಲ್ಲ. ಯುಎಪಿಎ ಪ್ರಕರಣವೆಂಬ ಕಾರಣ ನೀಡಿ, ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: 2016ರ ಅ.16ರಂದು ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಯಾಗಿತ್ತು. ಆರ್‌ಎಸ್‌ಎಸ್ ಸದಸ್ಯರ ಮನದಲ್ಲಿ ಭಯ ಮೂಡಿಸುವ ಉದ್ದೇಶದಿಂದಲೇ ರುದ್ರೇಶ್ ಹತ್ಯೆ ಮಾಡಲಾಗಿದೆ ಎಂಬ ಆರೋಪದಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ಆರೋಪಿಗಳ ವಿರುದ್ಧ ಐಪಿಸಿ, ಶಸಾಸ್ತ ಕಾಯ್ದೆ ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.